ಮನೆ ಕಳ್ಳತನ ಪ್ರಕರಣ: ಆರೋಪಿ ಬಂಧನ

ಕಾರ್ಕಳ, ಜ.18: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಖಾಲಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮಂಗಳೂರು ಗಂಜಿಮಠ ನಿವಾಸಿ ಮನೋತೋಷ್ ಕಾಯಲ್(39) ಬಂಧಿತ ಆರೋಪಿ. ಈತ ಬೆಳಿಗ್ಗೆ ಬೇರೆ ಬೇರೆ ಪ್ರದೇಶಗಳಲ್ಲಿ ಸಂಚರಿಸಿ ತುಂಬಾ ದಿನಗಳಿಂದ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ, ಬಳಿಕ ರಾತ್ರಿ ಬೀಗ ಒಡೆದು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದನು. ಈ ಬಗ್ಗೆ ಕಾರ್ಕಳ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಮನೆಯಲ್ಲಿನ ಬ್ಯಾಟರಿಯನ್ನು ಕದ್ದುಕೊಂಡು ಹೋಗಿರುವುದಾಗಿ ದೂರಲಾಗಿತ್ತು.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಎಸ್ಸೈಗಳಾದ ಪ್ರಸನ್ನ ಎಂ.ಎಸ್., ಸುಂದರ, ಎಎಸ್ಸೈಗಳಾದ ಪ್ರಕಾಶ, ಸುಂದರ ಗೌಡ, ಸಿಬ್ಬಂದಿ ರುದ್ರೇಶ್, ಚಂದ್ರಶೇಖರ್, ಸಂತೋಷ್, ಮಾಂತೇಶ್ ಮತ್ತು ಜಿಲ್ಲಾ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ಅವರನ್ನು ಒಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಆತನನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.





