ಅಸಲಿ ಕಂಚಿನ ಪ್ರತಿಮೆ ಸ್ಥಾಪನೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್ ನಾಯಕರಿಗೆ ನಾಲಿಗೆ ಎಷ್ಟು? : ಮಹಾವೀರ ಹೆಗ್ಡೆ

ಕಾರ್ಕಳ: ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಅವರು ತಾಲ್ಲೂಕಿನ ಬೈಲೂರಿನಲ್ಲಿ ಅಸಲಿ ಕಂಚಿನ ಪ್ರತಿಮೆ ಸ್ಥಾಪನೆಗೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ವಿಪರ್ಯಾಸವಾಗಿದ್ದು ಅವರಿಗೆ ನಾಲಿಗೆ ಎಷ್ಟು ಎಂದು ಬಿಜೆಪಿ ನಾಯಕ ಮಹಾವೀರ ಹೆಗ್ಡೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಪ್ರವಾಸೋದ್ಯಮ ಬೆಳವಣಿಗೆಯ ಹಿನ್ನೆಲೆಯಲ್ಲಿ ಶಾಸಕ ವಿ.ಸುನಿಲ್ ಕುಮಾರ್ ತಮ್ಮ ಅವಧಿಯಲ್ಲಿ ಪ್ರಯತ್ನಿಸಿ ಪ್ರತಿಷ್ಠಾಪಿಸಿದ ಮೂರ್ತಿಯನ್ನು ಮೊದಲು ಪ್ಲಾಸ್ಟಿಕ್ ಎಂದೂ, ನಂತರ ಸಿಮೆಂಟ್ ನದ್ದು ಎಂದೂ , ನಂತರ ಫೈಬರ್ ನದ್ದು ಎಂದೂ ಪ್ರತಿಭಟನೆ ನಡೆಸಿದ್ದಲ್ಲದೇ ದಿನದಿಂದ ದಿನ ವಿಚಿತ್ರ ಹೇಳಿಕೆಗಳನ್ನು ನೀಡುತ್ತಾ ಬಂದಿರುವ ಉದಯ ಕುಮಾರ್ ಶೆಟ್ಟಿ ಕಾರ್ಕಳದ ಸಾರ್ವಜನಿಕರ ನಂಬಿಕೆ ಹಾಗೂ ಪ್ರವಾಸೋದ್ಯಮಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡಿ ಸಾರ್ವಜನಿಕರ ಶಾಪಕ್ಕೆ ಗುರಿಯಾಗಿದ್ದಾರೆ.
ಈಗ ಇದ್ದಕ್ಕಿದ್ದಂತೆ ತನ್ನ ವರಸೆ ಬದಲಾಯಿಸಿ ಆದಷ್ಟು ಬೇಗ ಕಂಚಿನ ಪರಶುರಾಮ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕಾರ್ಕಳ ಪ್ರವಾಸೋದ್ಯಮಕ್ಕೆ ಅನುವು ಮಾಡಿ ಕೊಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಕಾರ್ಕಳ ಜನರಿಗೆ ಹಾಗೂ ಕಾಂಗ್ರೆಸ್‌ಗೂ ದ್ರೋಹ ಬಗೆದಂತಾಗಿದೆ. ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಸುಮಿತ್ ಬೈಲೂರು ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕಾರ್ಯದರ್ಶಿಗಳಾದ ಪ್ರವೀಣ್ ಸಾಲ್ಯಾನ್, ಜಯರಾಂ ಸಾಲ್ಯಾನ್, ಸತೀಶ್ ಬೋಳ, ದೇವೇಂದ್ರ ಶೆಟ್ಟಿ, ಸುರೇಶ್ ಉಪಸ್ಥಿತರಿದ್ದರು.







