ಮಾನವನ ಮನಸ್ಸೇ ಯುದ್ಧಗಳಿಗೆ ಮೂಲ: ಪ್ರೊ.ಪ್ರಿಯಾಂಕರ್ ಉಪಾಧ್ಯಾಯ

ಮಣಿಪಾಲ, ಆ.20: ಮಾನವನ ಮನಸ್ಸೇ ಯುದ್ಧಗಳಿಗೆ ಮೂಲವಾಗಿದೆ. ಶಾಂತಿ, ಸೌಂದರ್ಯಶಾಸ್ತ್ರ ಮತ್ತು ಕಲೆಗಳು ಯುದ್ಧಕ್ಕಿಂತ ಶಾಂತಿಯ ಕಡೆಗೆ ಹೊರಳಿಕೊಳ್ಳುವ ಅಗತ್ಯವಿದೆ ಎಂದು ವಾರಾಣಸಿಯ ಯುನೆಸ್ಕೋ ಚೇರ್ ಫಾರ್ ಪೀಸ್ ಅಂಡ್ ಇಂಟರ್ ಕಲ್ಚರಲ್ ಅಂಡರ್ ಸ್ಟ್ಯಾಂಡಿಂಗ್ ಇದರ ಪ್ರೊ.ಪ್ರಿಯಾಂಕರ್ ಉಪಾಧ್ಯಾಯ ಹೇಳಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್)ನ ಇಕಾಸೊಫಿ, ಎಸ್ಥೆಟಿಕ್ಸ್, ಪೀಸ್ ಮತ್ತು ಆರ್ಟ್ ಮೀಡಿಯಾದ ಹೊಸ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ನಡೆದ ಓರಿಯಂಟೇಶನ್ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತಿದ್ದರು.
ಕಲೆಯನ್ನು ಶಾಂತಿ, ಪರಿಸರ ಮತ್ತು ಕಲಾ ಮಾಧ್ಯಮದೊಂದಿಗೆ ಬೆಸೆಯುವ ನವೀನ ಪ್ರಯತ್ನವು ಈ ಹೊತ್ತಲ್ಲಿ ಜಗತ್ತಿಗೆ ಅಗತ್ಯವಿದೆ. ಹಿಂಸೆಯಿಂದ ಜರ್ಜರಿತವಾಗಿರುವ ಜಗತ್ತಿನಲ್ಲಿ ಶಾಂತಿಯ ದೃಷ್ಟಿಕೋನದಿಂದ ಕಲೆಯನ್ನು ಮರು ವ್ಯಾಖ್ಯಾನಿ ಸುವುದು ಗಾಂಧಿ ವಿಚಾರಗಳ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಮಾಹೆಯ ಸಂಶೋಧನಾ ವಿಭಾಗದ ನಿರ್ದೇಶಕ ಪ್ರೊ.ಸತೀಶ್ ರಾವ್ ಮಾತನಾಡಿ, ಶಾಂತಿ ಮತ್ತು ಪರಿಸರ ಅಧ್ಯಯನ ಹಾಗೂ ಶಾಂತಿ ಮತ್ತು ಕಲೆಗಳು ಸಂಶೋಧನೆಯಲ್ಲಿ ನವೀನ ಕ್ಷೇತ್ರಗಳಾಗಿವೆ, ಇದನ್ನು ಜಿಸಿಪಿಎಎಸ್ ಮುನ್ನಡೆಸಬೇಕು ಎಂದು ಹೇಳಿದರು.
ಏರ್ ಕಮೋಡೊರ್ ಹರೀಂದ್ರ ಕುಮಾರ್ ಧಿಮನ್ ಮಾತನಾಡಿದರು. ಯೋಗ ಮತ್ತು ವಿವಿಧ ಕಲೆಗಳು ಮನಸ್ಸಿನ ಶಾಂತಿಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ಮಾಹೆ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ವಿವರಿಸಿ ದರು. ರಾಜಕೀಯ ಶಾಸ್ತ್ರಜ್ಞ ಡಾ.ರಾಜಾರಾಂ ತೋಳ್ಪಾಡಿ ಸಂಘರ್ಷದಿಂದ ಕೂಡಿರುವ ಅಂತಾರಾಷ್ಟ್ರೀಯ ಸಂಬಂಧಗಳನ್ನು ಗಾಂಧಿಯ ದೃಷ್ಟಿಕೋನದಿಂದ ನೋಡುವ ಅಗತ್ಯವನ್ನು ಒತ್ತಿ ಹೇಳಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತ ನಾಡಿದರು. ವಿದುಷಿ ಭ್ರಮರಿ ಶಿವಪ್ರಕಾಶ್ ಸ್ವಾಗತ ಗೀತೆ ಹಾಡಿದರು. ಅಪೂರ್ವ ಸ್ವಾಗತ ನೃತ್ಯ ಪ್ರದರ್ಶಿಸಿದರು. ಅಪರ್ಣಾ ಪರಮೇಶ್ವರನ್ ಕಾರ್ಯಕ್ರಮ ನಿರೂಪಿಸಿ, ತನಿಷ್ಕಾ ಕೋಟ್ಯಾನ್ ವಂದಿಸಿದರು.







