ಸಂವಿಧಾನ ಬದಲಾಯಿಸಿದರೆ ಭಾರತ ಛಿದ್ರ: ಜಯನ್ ಮಲ್ಪೆ

ಉಡುಪಿ, ಜ.26: ಎಲ್ಲಾ ಜಾತಿ, ಧರ್ಮದವರಿಗೆ ವಿಶೇಷ ಸೌಲಭ್ಯಗಳನ್ನು ನೀಡಿ, ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಘನತೆಯನ್ನು ತಂದುಕೊಟ್ಟ ಸಂವಿಧಾನವನ್ನು ಬದಲಾಯಿಸಿ ಮನುಸ್ಮತಿ ಜಾರಿ ತರಲು ಹೊರಟರೆ ಭಾರತ ಛಿದ್ರವಾದಿತು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ 77ನೇ ಗಣರಾಜ್ಯೋತ್ಸವದ ಪ್ರಯುಕ್ತ ಮಣಿಪಾಲದ ರಜತಾದ್ರಿಯ ಅಂಬೇಡ್ಕರ್ ಪ್ರತಿಮೆಯ ಎದುರು ಸೋಮವಾರ ಆಯೋಜಿಸಲಾದ ಸಂವಿಧಾನ ರಕ್ಷಿಸಿ ಭಾರತ ಉಳಿಸಿ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ನಮ್ಮ ಸಂವಿಧಾನ ಉಳಿದರೆ ನಮ್ಮ ದೇಶದ ಸಮಗ್ರತೆ, ಸಂಸ್ಕೃತಿ ಮತ್ತು ಜನರ ಬದುಕು ಉಳಿಯುತ್ತದೆ. ನಮ್ಮ ಸಂವಿಧಾನವು ಎಲ್ಲಿಯವರೆಗೆ ಸುರಕ್ಷಿತವಾಗಿರುತ್ತದೆಯೋ ಅಲ್ಲಿಯವರೆಗೆ ನಾವೆಲ್ಲರೂ ಸುರಕ್ಷಿತ. ಇಲ್ಲವೇ ನಾಶವಾಗುತ್ತೇವೆ. ಹಾಗಾಗಿ ಸಂವಿಧಾನವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದರು.
ಅಂಬೇಡ್ಕರ್ ಯುವಸೇನೆಯ ಪಡುಬಿದ್ರಿ ಶಾಖೆಯ ಗೌರವಾಧ್ಯಕ್ಷ ಕೃಷ್ಣ ಬಂಗೇರ ಮಾತನಾಡಿ, ಬಾಬಾ ಸಾಹೇಬ ಅಂಬೇಡ್ಕರ್ ನಮ್ಮ ಸಂವಿಧಾನ ಬರೆಯಲು ಹಗಲು ರಾತ್ರಿಯೆನ್ನದೆ ನಿದ್ದೆಗೆಟ್ಟು ಅಸ್ತಮ ರೋಗ ಬಂದರೂ ತನ್ನ ಸಮಾಜದ ಬಹುಜನರಿಗಾಗಿ ಬದುಕನ್ನು ತ್ಯಾಗಮಾಡಿದ್ದಾರೆ. ಅವರ ಋಣದಲ್ಲಿರುವ ನಾವು ಈ ಸಂವಿಧಾನವನ್ನು ಉಳಿಸಿಕೊಳ್ಳಲ್ಲೇ ಬೇಕು ಎಂದು ಹೇಳಿದರು.
ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ನಮ್ಮ ಸಂವಿಧಾನವನ್ನು ಕಳೆದುಕೊಳ್ಳುವ ಆತಂಕ ಈಗ ಎದುರಾಗಿದೆ. ಸಂವಿಧಾನವೆನ್ನುವುದು ಒಂದು ಪುಸ್ತಕವಲ್ಲ. ನಮ್ಮ ಬದುಕಿನ ವಿಧಾನ. ಅದು ನಮ್ಮ ಕೈತಪ್ಪಿ ಹೋಗುತ್ತಿದೆ, ನಾವೀಗ ಅನೇಕ ದುಷ್ಟ ಸಮೀಕರಣಗಳ ನಡುವೆ ನಿಂತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವಸೇನೆಯ ಮುಖಂಡರಾದ ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು ಮಾತನಾಡಿದರು. ದಲಿತ ನಾಯಕರಾದ ವಸಂತ ಪಾದೆಬೆಟ್ಟು, ಸುಜೀತ್ ಪಡುಬಿದ್ರಿ, ಕೃಷ್ಣ ಶ್ರೀಯಾನ್ ಮಲ್ಪೆ, ಅರುಣ್ ಸಾಲ್ಯಾನ್, ಸತೀಶ್ ಮಂಚಿ, ಸುಧಾಕರ ಪಡುಬಿದ್ರೆ, ಭಗವಾನ್ ಮಲ್ಪೆ, ರತನ್ ನೆರ್ಗಿ, ಶಶಿಕಾಂತ್ ಲಕ್ಷ್ಮಿನಗರ, ಪ್ರಸಾದ್ ಮಲ್ಪೆ, ಶಂಕರ್ ಪಡುಬಿದ್ರಿ, ದಯಾಕರ ಮಲ್ಪೆ, ಸಾಧು ಚಿಟ್ಪಾಡಿ, ಸುಕೇಶ್ ನಿಟ್ಟೂರು, ಅಶೋಕ್ ಪುತ್ತೂರು, ರವಿರಾಜ್ ಲಕ್ಷ್ಮೀನಗರ, ಕುಮಾರಿ ಧನುಜ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು. ಸತೀಶ್ ಕಪ್ಪೆಟ್ಟು ಸ್ವಾಗತಿಸಿದರು. ದೀಪಕ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.







