ಅಕ್ರಮ ಮಾದಕ ವಸ್ತು ಸಾಗಾಟ: ಇಬ್ಬರು ಆರೋಪಿಗಳ ಬಂಧನ

ಶಿರ್ವ, ಮಾ.8: ಮಾದಕ ವಸ್ತು ಅಕ್ರಮ ಸಾಗಾಟಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಶಿರ್ವ ಪೊಲೀಸರು ಮಾ.6ರಂದು ಸಂಜೆ ವೇಳೆ ಪಾದೂರು ಗ್ರಾಮದ ಚಂದ್ರನಗರ ಜನತಾ ಕಾಲೋನಿ ಎಂಬಲ್ಲಿ ಬಂಧಿಸಿದ್ದಾರೆ.
ಬೆಳಪು ಗ್ರಾಮದ ದರ್ಗಾ ಬಳಿಯ ನಿವಾಸಿ ಝಹೀರ್ ಅಹ್ಮದ್(66) ಮತ್ತು ಬೆಳಪು ಸ್ಟಡಿ ಸರ್ಕಲ್ ನಿವಾಸಿ ಸಯ್ಯದ್ ಶಮೀಮ್(28) ಬಂಧಿತ ಆರೋಪಿಗಳು. ಇವರಿಂದ 2.83 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ಮೊಬೈಲ್ ಪೋನ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಕಾರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಮಾದಕ ವಸ್ತು ಸಾಗಿಸುತ್ತಿರುವುದು ಕಂಡುಬಂತು. ಅದರಂತೆ ಕಾರಿನಲ್ಲಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್.ನಾಯ್ಕ್ ನಿರ್ದೇಶನದಂತೆ, ಕಾರ್ಕಳ ಪೊಲೀಸ್ ಉಪಾಧೀಕ್ಷಕ ವಿಜಯ್ ಪ್ರಸಾದ್ ಮತ್ತು ಕಾಪು ವೃತ್ತ ನಿರೀಕ್ಷಕ ಅಝಮತ್ ಆಲಿ ಮಾರ್ಗದರ್ಶನದಲ್ಲಿ ಶಿರ್ವ ಪೊಲೀಸ್ ಠಾಣಾ ಎಸ್ಸೈಗಳಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಹಾಗೂ ಠಾಣಾ ಸಿಬ್ಬಂದಿಗಳು ಹಾಗೂ ಅಪರಾಧ ಪರಿಶೀಲನಾಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.





