ಉತ್ತಮ ಛಾಯಾಗ್ರಹಣಕ್ಕೆ ತಂತ್ರಜ್ಞಾನಕ್ಕಿಂತ ‘ಕಲ್ಪನೆ’ ಮುಖ್ಯ: ಆಸ್ಟ್ರೋ ಮೋಹನ್

ಮಣಿಪಾಲ, ಅ.30: ಉತ್ತಮ ಛಾಯಾಗ್ರಹಣದಲ್ಲಿ ಕ್ಯಾಮೆರಾದ ತಂತ್ರಜ್ಞಾನಕ್ಕಿಂತಲೂ ಛಾಯಾಗ್ರಾಹಕನಿಗೆ ಚಿತ್ರದ ಕುರಿತು ಇರುವ ‘ಕಲ್ಪನೆ’ಯೇ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹಿರಿಯ ಛಾಯಾಗ್ರಾಹಕ -ಪತ್ರಕರ್ತ ಆಸ್ಟ್ರೋ ಮೋಹನ್ ಹೇಳಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ‘ಎ ಫೋಟೋಗ್ರಾಫಿಕ್ ಜರ್ನಿ’ ವಿಷಯದ ಕುರಿತು ಅವರು ಮಾತನಾಡಿದರು.
ಛಾಯಾಗ್ರಹಣದ ತಂತ್ರಜ್ಞಾನವು ತುಂಬಾ ಮುಂದುವರಿದಿದೆ. ಈಗ ಎಲ್ಲರೂ ಮೊಬೈಲ್ ಫೋನ್ ಮೂಲಕವೇ ನೂರಾರು ಛಾಯಾಚಿತ್ರಗಳನ್ನು ತಕ್ಷಣವೇ ತೆಗೆಯಬಹುದು. ಆದರೆ ಇವು ಪ್ರಾಥಮಿಕವಾಗಿ ಸ್ನ್ಯಾಪ್ ಶಾಟ್‌ಗಳಾಗಿರುತ್ತವೆಯೇ ಹೊರತು ಛಾಯಾಚಿತ್ರಗಳಲ್ಲ ಎಂದವರು ಅಭಿಪ್ರಾಯ ಪಟ್ಟರು.
ಛಾಯಾಚಿತ್ರಗಳನ್ನು ಯೋಚಿಸಿ ತೆಗೆದರೆ ಅದು ಅರ್ಥಪೂರ್ಣವಾಗಿರುತ್ತದೆ ಎಂದ ಆಸ್ಟ್ರೋ ಮೋಹನ್, ಮಂಗಳೂರು ವಿಮಾನಅಪಘಾತ, ಶ್ರೀಕೃಷ್ಣಮಠ ಪರಿಸರದಲ್ಲಿ ಆನೆ ಓಡಾಟ, ಗುಜರಾತ್ ಭೂಕಂಪ, ಪಾಜಕದಲ್ಲಿ ಕಲ್ಲು ಗಣಿಗಾರಿಕೆ ಸೇರಿದಂತೆ ತಮ್ಮ ಪ್ರಮುಖ ಛಾಯಾಚಿತ್ರಗಳ ಕುರಿತು ವಿವರಣೆ ಯನ್ನು ನೀಡಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಸುದ್ದಿ ಮತ್ತು ಮಾನವ ಆಸಕ್ತಿಯ ಛಾಯಾಗ್ರಹಣದಲ್ಲಿ, ಸರಿಯಾದ ಕ್ಷಣವನ್ನು ಸೆರೆಹಿಡಿಯಲು ಆ ಸಂದರ್ಭಗಳಿಗೆ ಜೀವಂತವಾಗಿರಬೇಕು ಎಂದರು. ಜಿಸಿಪಿಎಎಸ್ ವಿಷುಯಲ್ ಆರ್ಟ್ಸ್ ಕ್ಲಬ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.







