ಕರ್ನಾಟಕದಲ್ಲಿ ಲೇಬರ್ ಕೋಡ್ ಜಾರಿ ಕಾರ್ಮಿಕರಿಗೆ ಮಾಡುವ ದ್ರೋಹ : ಕಲ್ಲಾಗರ್

ಕುಂದಾಪುರ, ಜ.26: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್ ಗಳನ್ನು ರಾಜ್ಯ ಸರಕಾರವು ಯಥಾವತ್ತಾಗಿ ಗಣರಾಜ್ಯೋತ್ಸವ ದಿನ ಜಾರಿ ಮಾಡಲು ಹೊರಟಿರುವುದು ರಾಜ್ಯದ ಕಾರ್ಮಿಕರಿಗೆ ಬಗೆದ ದ್ರೋಹ. ಕಾರ್ಮಿಕರಿಗೆ ಅನ್ಯಾಯ ಮಾಡುವ ವಿಚಾರದಲ್ಲಿ ಬಿಜೆಪಿಗೂ ಕಾಂಗ್ರೇಸ್ ನೀತಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಟೀಕಿಸಿದ್ದಾರೆ.
ತ್ರಾಸಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನಾಯಕವಾಡಿ ರಾಮ ಮಂದಿರ ಹತ್ತಿರ ರವಿವಾರ ನಡೆದ ಕಾರ್ಮಿಕ ಸಂಘ, ಕೂಲಿಕಾರರ ಸಂಘ, ದಲಿತ ಹಕ್ಕುಗಳ ಸಮಿತಿ, ಜನವಾದಿ ಮಹಿಳಾ ಸಂಘಟನೆಗಳ ಜಂಟಿ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಕೈಗಾರಿಕಾ ಸಂಬಂಧಗಳ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಪಡೆಯದ ರಾಜ್ಯ ಕಾಂಗ್ರೆಸ್ ಸರಕಾರ ಸಂಹಿತೆಯಲ್ಲಿ ಸೇರಿಸದೆ ಬಿಟ್ಟಿರುವ ಕೆಲವು ಕಠಿಣ ಷರತ್ತುಗಳನ್ನು ಕರಡು ನಿಯಮಗಳಲ್ಲಿ ಸೇರಿಸುವ ಮೂಲಕ ರಾಜ್ಯದಲ್ಲಿನ ಕಾರ್ಮಿಕರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದೆ ಎಂದರು.
ಕಾರ್ಮಿಕ ಸಂಘಗಳು ಮುಷ್ಕರ ಮಾಡಲು ಬಹುಸಂಖ್ಯೆಯ ಕಾರ್ಮಿಕರ ಒಪ್ಪಿಗೆ, ಮುಷ್ಕರದ ನೋಟಿಸ್ಗೆ ಪ್ರಧಾನ ಕಾರ್ಯದರ್ಶಿ ಜೊತೆಗೆ ಎಲ್ಲಾ ಪದಾಧಿಕಾರಿಗಳ ಮತ್ತು ಆಯ್ಕೆಗೊಂಡ 5 ಮಂದಿ ಇತರೆ ಕಾರ್ಮಿಕ ಪ್ರತಿನಿಧಿಗಳ ಸಹಿ ಕಡ್ಡಾಯಗೊಳಿಸಿದೆ. ಸಂಹಿತೆಯಲ್ಲಿ ವಿವಿಧ ಸ್ವರೂಪದ ಮುಷ್ಕರವನ್ನು ನಿಷೇಧಿಸುವ ಮತ್ತು ಅಕ್ರಮ ಮುಷ್ಕರಕ್ಕೆ ಕಾರ್ಮಿಕ ಸಂಘದ ಪದಾಧಿಕಾರಿಗಳಿಗೆ, ಸದಸ್ಯರಿಗೆ, ಬೆಂಬಲಿಸುವವರಿಗೆ ವಿಧಿಸಿರುವ ದಂಡ ಮತ್ತು ಶಿಕ್ಷೆಯನ್ನು ಕರಡು ನಿಯಮಾವಳಿಗಳಲ್ಲಿಯೂ ಮತ್ತಷ್ಟು ಬಿಗಿಗೊಳಿಸ ಲಾಗಿದೆ. ಕಾರ್ಮಿಕರ ಮುಷ್ಕರದ ಹಕ್ಕನ್ನು ಮತ್ತಷ್ಟು ಕಠಿಣಗೊಳಿಸಿ, ದಮನ ಮಾಡುವ ಈ ಕ್ರಮವು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಅವರು ಆರೋಪಿಸಿದರು.
ಸಂವಿಧಾನದ ಅನುಚ್ಛೇದ 246ರ ಅನ್ವಯ ಕಾರ್ಮಿಕ ಕಾನೂನುಗಳು ಸಮವರ್ತಿ ಪಟ್ಟಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡು ಕಾನೂನುಗಳನ್ನು ರಚಿಸುವ ಅಧಿಕಾರ ಹೊಂದಿದೆ. ಆದರೆ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಕೇಂದ್ರದ ಬಿಜೆಪಿ ಸರಕಾರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸುವ, ಮಾರ್ಪಡಿಸುವ, ಹೊಸದಾಗಿ ಪರ್ಯಾಯ ಕಾರ್ಮಿಕ ಕಾನೂನು ರೂಪಿಸುವ ಸಂವಿಧಾನಬದ್ಧ ಅಧಿಕಾರ ಬಳಸುವ ಹೊಣೆಗಾರಿಕೆ ಪ್ರದರ್ಶಿಸಿಲ್ಲ ಎಂದು ಅವರು ತಿಳಿಸಿದರು.
ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ಸಂತೋಷ್ ಹೆಮ್ಮಾಡಿ, ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, ಜನವಾದಿ ಮಹಿಳಾ ಸಂಘಟನೆಯ, ಬೀಡಿ ಕಾರ್ಮಿಕರ ಸಂಘದ ಮುಖಂಡರಾದ ಬಲ್ಕೀಸ್ ಮಾತನಾಡಿದರು.
ಗುಜ್ಜಾಡಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ ಗಾಣಿಗ, ಶಂಕರ ಆಚಾರ್ಯ, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರ ಸರಕಾರ ಸಂಹಿತೆಗಳ ರದ್ಧತಿಗೆ ಕಾರ್ಮಿಕ ಸಂಘಟನೆಗಳು ಫೆ.12ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದರೂ ಲೆಕ್ಕಿಸದೇ ಸಂಹಿತೆಗಳ ಜಾರಿಗೆ ಮುಂದಾಗಿರುವ ರಾಜ್ಯದ ಬಂಡ ಕಾಂಗ್ರೆಸ್ ಸರಕಾರದ ಧೋರಣೆಯನ್ನು ಖಂಡನೀಯ. ಫೆ.12ರಂದು ಕೇಂದ್ರ ಮತ್ತು ರಾಜ್ಯದ ಎರಡು ಸರಕಾರಗಳ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ರಾಜ್ಯದಲ್ಲಿ ಲಕ್ಷಾಂತರ ದುಡಿಯುವ ಜನತೆ ಸ್ವಯಂ ಪ್ರೇರಣೆಯಿಂದ ಉತ್ಪಾದನೆ, ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಿ ಪ್ರತಿರೋಧ ನೀಡಲಿದ್ದಾರೆ’
-ಸುರೇಶ್ ಕಲ್ಲಾಗರ್, ರಾಜ್ಯ ಕಾರ್ಯದರ್ಶಿ, ಸಿಐಟಿಯು







