ಕೋಡಿ ಸೇತುವೆ ಬಳಿ ಪುರಸಭೆಯಿಂದ ಸಿಸಿಟಿವಿ ಕ್ಯಾಮೆರಾ ಉದ್ಘಾಟನೆ

ಕುಂದಾಪುರ, ನ.26: ಕೋಡಿ ಸೇತುವೆ ಸಮೀಪದಲ್ಲಿ ಕಸ-ತ್ಯಾಜ್ಯ ಎಸೆಯದಂತೆ ಹಾಗೂ ಆ ಪರಿಸರದಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ಕ್ರಮಕೈಗೊಳ್ಳುವ ಸಲುವಾಗಿ ಮುನ್ನೆಚ್ಚರಿಕೆ ವಹಿಸಲು ದಾನಿಗಳ ನೆರವಿನಿಂದ ಅಳವಡಿಸಲಾದ ಸಿಸಿಟಿವಿಯನ್ನು ಬುಧವಾರ ಸಂಜೆ ಉದ್ಘಾಟಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಆನಂದ ಜೆ. ಮಾತನಾಡಿ, ಕೋಡಿ ಸೇತುವೆ ಬಳಿ ಕಸ ಎಸೆಯದಂತೆ ತಡೆಯುವ ನಿಟ್ಟಿ ನಲ್ಲಿ ದಾನಿಗಳ ನೆರವಿನಿಂದ ಸಿಸಿಟಿವಿ ಅಳವಡಿಸಲಾಗಿದೆ. ಶಾಶ್ವತ ಕಣ್ಗಾವಲಿನ ನಿಟ್ಟಿನಲ್ಲಿ ಈ ಕಾರ್ಯ ಕೈಗೊಳ್ಳ ಲಾಗಿದೆ. ಇಲ್ಲಿನ ಕೆಮರಾ ದಿನದ 24ಗಂಟೆ ಕೆಲಸ ಮಾಡುತ್ತದೆ. ಪುರಸಭೆಯಲ್ಲಿ ದೃಶ್ಯಾವಳಿಗಳನ್ನು ಕಚೇರಿಯಲ್ಲಿ ಮಾನಿಟರಿಂಗ್ ಮಾಡಲಾಗುತ್ತದೆ. ಇಲ್ಲಿ ಕಸ ಎಸೆಯುವುದು ಕಂಡು ಬಂದರೆ ದಂಡ, ಇನ್ನಿತರ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಗತ್ಯ ಸಮಯದಲ್ಲಿ ಪೊಲೀಸ್ ಇಲಾಖೆಯ ನೆರವನ್ನು ಪಡೆಯಲಾಗುವುದು ಎಂದರು.
ದಾನಿಗಳಾದ ಪುರಸಭೆ ಮಾಜಿ ಅಧ್ಯಕ್ಷೆ ಗುಣರತ್ನಾ ಮಾತನಾಡಿ, ಕೋಡಿಯು ಸಮುದ್ರ ತೀರ, ಸೀವಾಕ್ ಸಹಿತ ಪ್ರವಾಸಿ ತಾಣವಾಗಿದ್ದು ಇಲ್ಲಿಗೆ ಸಾವಿರಾರು ಮಂದಿ ಆಗಮಿಸುತ್ತಾರೆ. ಇಲ್ಲಿನ ಪರಿಸರ ಸ್ವಚ್ಛತೆ ಕಾಪಾಡುವುದು ಅವಶ್ಯಕ. ಪೌರ ಕಾರ್ಮಿಕರು ನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೂ ಕೂಡ ಕೆಲ ಜನರು ಇಲ್ಲಿ ಬಂದು ಕಸ ಎಸೆಯುತ್ತಿದ್ದು, ಅದು ಹೊಳೆಗೆ ಸೇರುತ್ತದೆ. ಸ್ವಚ್ಛತೆಯ ಜಾಗೃತಿ ಎಲ್ಲರಲ್ಲಿಯೂ ಮೂಡಬೇಕಾಗಿದೆ. ಆರೋಗ್ಯದ ನಿಟ್ಟಿನಲ್ಲಿ ಸ್ವಚ್ಛತೆ ಅವಶ್ಯಕ. ಹೀಗಾಗಿ ಪುರಸಭೆಯ ಮನವಿ ಮೇರೆಗೆ ಸಿಸಿ ಟಿವಿ ನೀಡಲಾಗಿದ್ದು ಕಾಸ ಎಸೆಯುವರ ವಿರುದ್ಧ ದಾಖಲೆ ಸಹಿತವಾಗಿ ಶಿಸ್ತು ಕ್ರಮಕೈಗೊಂಡು ಅಂತವರಿಗೆ ಪಾಠ ಕಲಿಸುವ ಜೊತೆಗೆ ಬೇರೆಯವರು ಹಾಕದಂತೆ ಎಚ್ಚರಿಕೆ ಸಂದೇಶ ರವಾನಿಸಬೇಕು ಎಂದರು.
ಕೋಡಿಯ ಚಕ್ರಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಾಲ ಪೂಜಾರಿ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯ್ಕ್, ಕೋಡಿಯ ಪ್ರಮುಖರಾದ ಶಂಕರ ಪೂಜಾರಿ, ವಿಠ್ಠಲ ಪೂಜಾರಿ, ಸಂಜೀವ ಪೂಜಾರಿ, ಪುರಸಭೆ ಸಿಬಂದಿಗಳು ಉಪಸ್ಥಿತರಿದ್ದರು.






