ಕೇಂದ್ರ, ರಾಜ್ಯ ಸರಕಾರಗಳಿಂದ ಬೀಡಿ ಕಾರ್ಮಿಕರ ನಿರ್ಲಕ್ಷ್ಯ: ಜೆ.ಬಾಲಕೃಷ್ಣ ಶೆಟ್ಟಿ

ಉಡುಪಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೀಡಿ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ. ಕಾರ್ಪೊರೇಟ್ ಕಂಪೆನಿ, ಬಂಡವಾಳಶಾಹಿ ಗಳ ಆಸ್ತಿಗಳನ್ನು ಹೆಚ್ಚಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿವೆ ಎಂದು ಕರ್ನಾಟಕ ರಾಜ್ಯ ಬೀಡಿ ಫೆಡರೇಶನ್ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್(ಸಿಐಟಿಯು) ವತಿಯಿಂದ ಇಂದು ಅಜ್ಜರಕಾಡು ವಿಮಾ ನೌಕರರ ಸಂಘದ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ 8ನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬೀಡಿ ಕಾರ್ಮಿಕರ ಸರಕಾರ ನಿಗದಿ ಮಾಡಿದ ತುಟ್ಟಿಭತ್ಯೆ, ಕನಿಷ್ಟಕೂಲಿ ಯನ್ನು ಮಾಲೀಕರು ಕಾರ್ಮಿಕರಿಗೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕರಿಗೆ ಕನಿಷ್ಟ ವೇತನ ಸರಕಾರ ನಿಗದಿ ಮಾಡಿದ 301ರೂ. ನೀಡದೆ 287ರೂ. ನೀಡುವುದಾಗಿ ಹೇಳಿ ಅದನ್ನು ಕೂಡ ಮಾಲಕರು ನೀಡುತ್ತಿಲ್ಲ. ಆದುದರಿಂದ ಕಾರ್ಮಿಕರು ಮುಂದಿನ ದಿನದಲ್ಲಿ ನಿರ್ಣಾಯಕ ವಾದ ಹೋರಾಟಕ್ಕೆ ಮುಂದಾಗಬೇಕು ಎಂದರು.
ದೇವರು, ಧರ್ಮದ ಹೆಸರಿನಲ್ಲಿ ಕಾರ್ಮಿಕರನ್ನು ಹೋರಾಟದ ದಿಕ್ಕಿನಿಂದ ಬೇರೆ ಕಡೆಗೆ ತಿರುಗಿಸುವ ಹುನ್ನಾರ ಮಾಡಲಾಗುತ್ತಿದೆ. ಇದರಿಂದ ಹೋರಾಟಗಳು ಸೊರಗುತ್ತಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಮಿಕರು ಬೀದಿಗೆ ಇಳಿದು ಹೋರಾಟ ಮಾಡಿದರೆ ಎಲ್ಲ ರೀತಿಯ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ಎಂದು ಅವರು ಹೇಳಿದರು.
ನಮ್ಮನ್ನು ಅಳುವ ಸರಕಾರದ ಪ್ರತಿನಿಧಿಗಳು, ಶಾಸಕರು, ಸಂಸದರು ಯಾರು ಇವತ್ತು ಅಧಿವೇಶನದಲ್ಲಿ ಬೀಡಿ ಕಾರ್ಮಿಕರ ಬಗ್ಗೆ ಮಾತಾನಾಡುವು ದಿಲ್ಲ. ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ 3ಲಕ್ಷ ಕ್ಕೂ ಮಿಕ್ಕಿ ಬೀಡಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಸ್ಥಿತಿ ಇಂದು ಚಿಂತಾಜನಕವಾಗಿದೆ. ಹಾಗಾಗಿ ನ.24.ರಿಂದ ಅನಿರ್ದಿಷ್ಟ ಅಹೋರಾತ್ರಿ ಹೋರಾಟವನ್ನು ಜಿಲ್ಲಾಧಿಕಾರಿ ಕಛೇರಿ ಮುಂದೆ ಮತ್ತು 28ರಂದು ಸಹಾಯಕ ಕಮೀಷನರ್ ಕಛೇರಿ ಮುತ್ತಿಗೆ ಹಾಕಲಾಗುವುದು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಬೀಡಿ ಫೆಡರೇಶನ್ ಉಪಾಧ್ಯಕ್ಷೆ ಬಲ್ಕೀಸ್, ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಜನವಾದಿ ಮಹಿಳಾ ಸಂಘದ ಕಾರ್ಯದರ್ಶಿ ಶೀಲಾವತಿ, ಉಡುಪಿ ಬೀಡಿ ಸಂಘದ ಅಧ್ಯಕ್ಷೆ ನಳಿನಿ.ಎಸ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಬೀಡಿ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇಯರ ಹೊಬಳಿ ವಹಿಸಿದ್ದರು. ಫೆಡರೇಶನ್ ಕಾರ್ಯದರ್ಶಿ ಉಮೇಶ್ ಕುಂದರ್ ಸ್ವಾಗತಿಸಿ, ವರದಿ ಮಂಡಿಸಿದರು. ಕೋಶಾಧಿಕಾರಿ ಕವಿರಾಜ್ ಎಸ್.ಕಾಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಮ್ಮೇಳನದಲ್ಲಿ ಮುಂದಿನ 3ವರ್ಷಗಳ ಅವಧಿಗೆ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ 15 ಜನರ ನೂತನ ಸಮಿತಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಉಮೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್, ಕೋಶಾಧಿಕಾರಿ ಬಲ್ಕೀಸ್ ಸರ್ವಾನುಮತದಿಂದ ಆಯ್ಕೆಯಾದರು.







