ವಿಶೇಷ ಕಾರ್ಯ ಪಡೆಗೆ ಸೇರ್ಪಡೆಯಿಂದ ಉಡುಪಿ ಜಿಲ್ಲೆಯ ಘನತೆಗೆ ಧಕ್ಕೆ ಇಲ್ಲ: ಡಾ.ಪರಮೇಶ್ವರ್

ಉಡುಪಿ, ಜೂ.14: ಕರಾವಳಿ ಭಾಗದಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳ ಆಧಾರದಲ್ಲಿ ಕೋಮು ಸಂಘರ್ಷಗಳ ತಡೆಗಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಯಾವುದೇ ಜಿಲ್ಲೆಯನ್ನ ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸಲು ನಾವು ಇದನ್ನು ಮಾಡಿಲ್ಲ. ಇದರ ಅಗತ್ಯವೂ ಎಲ್ಲೂ ಬರಬಾರದೆಂದು ಈಗಾಗಲೇ ಹೇಳಿದ್ದೇನೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ಸಂಜೆ ಕೊಲ್ಲೂರಿನಲ್ಲಿ ವಾಸ್ತವ್ಯ ಮಾಡಿದ್ದ ಡಾ.ಪರಮೇಶ್ವರ್ ಇಂದು ಬೆಳಗ್ಗೆ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉಡುಪಿಗೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಶೇಷ ಕಾರ್ಯ ಪಡೆಗೆ ಉಡುಪಿ ಜಿಲ್ಲೆಯ ಸೇರ್ಪಡೆಯನ್ನು ವಿರೋಧಿಸಿ ಶಾಸಕ ಯಶ್‌ಪಾಲ್ ಸುವರ್ಣ ಅವರು ನೀಡಿರುವ ಹೇಳಿಕೆಗೆ ಗೃಹ ಸಚಿವರು ಪ್ರತಿಕ್ರಿಯಿಸಿದರು.
ಈ ಪಡೆಯ ಉಪಯೋಗ ಆಗದಿರುವಂತೆ ನೋಡಿಕೊಳ್ಳಿ ಅಂತ ಸಾರ್ವಜನಿಕರಿಗೂ ನಾನು ಮನವಿ ಮಾಡಿದ್ದೇನೆ. ಕೋಮುವಾದಕ್ಕೆ ಸಂಬಂಧಪಟ್ಟ ಘಟನೆ ನಡೆಯದಿದ್ದಲ್ಲಿ ಈ ಕಾರ್ಯಪಡೆ ಅಗತ್ಯ ಬರೋದಿಲ್ಲ. ಅಗತ್ಯ ಇದೆ ಇಲ್ಲ ಅನ್ನೋದನ್ನ ಸಾರ್ವಜನಿಕರೇ ನಿರ್ಧಾರ ಮಾಡಬೇಕು. ಇದರ ಅಗತ್ಯ ಬರದಿದ್ದಲ್ಲಿ ಕೋಮುವಾದ ಸಂಪೂರ್ಣ ಹೋಗಿದೆ ಅಂತ ಅರ್ಥ ಅಲ್ವ ಎಂದವರು ನಗುತ್ತಾ ಪ್ರಶ್ನಿಸಿದರು.
ಇಲ್ಲಿ ಘನತೆಗೆ ಧಕ್ಕೆ ಬರುವ ವಿಚಾರವೇ ಇಲ್ಲ. ನಕ್ಸಲರ ನಿಗ್ರಹಕ್ಕಾಗಿ ಕಾರ್ಕಳ ಭಾಗದಲ್ಲಿ ಎಎನ್ ಎಫ್ ಮುಖ್ಯ ಕಚೇರಿ ಮಾಡಿದ್ದೆವು. ಎಎನ್ಎಫ್ ನಿಂದ ಉಡುಪಿಯ ಘನತೆ ಕಡಿಮೆಯಾಯಿತಾ? ನಕ್ಸಲರಿಂದ ಬಹಳಷ್ಟು ಜನರ ಹತ್ಯೆ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಉಡುಪಿಯಲ್ಲಿ ಎಎನ್ ಎಫ್ ಕಚೇರಿ ಆರಂಭಿಸಿದ್ದೆವು. ಇದರಿಂದ ಉಡುಪಿ ಜನಸಮುದಾಯದ ಘನತೆಗೆ ಧಕ್ಕೆ ಆಗಿಲ್ಲ ಎಂದು ಸಮಜಾಯಿಷಿ ನೀಡಿದ ಗೃಹ ಸಚಿವರು, ಪೊಲೀಸ್ ವ್ಯವಸ್ಥೆ ಇದೆ ಎಂದ ಮಾತ್ರಕ್ಕೆ ಘನತೆಗೆ ಧಕ್ಕೆ ಆಗುತ್ತಾ? ಊರಿಗೆ ಅವಮಾನವಾಗುತ್ತಾ ಎಂದು ಮರು ಪ್ರಶ್ನಿಸಿದರು.
ಕಮಿಷನರ್ ಅವರು ಕಾರ್ಯಪಡೆಯ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ನೋಡಿಕೊಳ್ತಾರೆ. ಐಜಿ ಅವರು ಮೂರು ಜಿಲ್ಲೆಗಳನ್ನು ಮಾನಿಟರ್ ಮಾಡ್ತಾರೆ ಎಂದರು.
ರಾಜ್ಯದಲ್ಲಿ ಮತ್ತೆ ಜಾತಿ ಜನಗಣತಿ ವಿಚಾರದ ಕುರಿತು ಉತ್ತರಿಸಿದ ಗೃಹ ಸಚಿವರು, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಸಂಪುಟ ತೀರ್ಮಾನ ಮಾಡಿದೆ. ಅನೇಕ ಸಮುದಾಯ, ಸಂಘ ಸಂಸ್ಥೆಗಳು ಜಾತಿ ಜನಗಣತಿಯಲ್ಲಿ ಅಂಕಿ ಅಂಶ ಸರಿಯಿಲ್ಲ ಎಂದು ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಹೊಸ ಸಮೀಕ್ಷೆಗೆ ನಿರ್ಧರಿಸಲಾಗಿದೆ ಎಂದರು.
ಜನಗಣತಿಯಲ್ಲಿ ನಮ್ಮ ಸಮುದಾಯದ ಸಂಖ್ಯೆ ಕಡಿಮೆ ಇದೆ . ಜಾತಿ ಜನಗಣತಿ ಯಲ್ಲಿ ಹತ್ತು ವರ್ಷದ ಹಳೆಯ ಡೇಟಾ ಇದೆ ಎಂದು ಬಹಳಷ್ಟು ಮಂದಿ ಆಕ್ಷೇಪ ಎತ್ತಿದ್ದಾರೆ. ಅಲ್ಲದೇ ಕಳೆದ ಹತ್ತು ವರ್ಷಗಳಲ್ಲಿ ಒಂದೂವರೆ ಕೋಟಿ ಜನಸಂಖ್ಯೆ ಸೇರ್ಪಡೆ ಆಗಿರೋದು ಗಣನೆಗೆ ತೆಗೆದುಕೊಳ್ಳಲು ಸಲಹೆ ಬಂದಿತ್ತು. ಇದನ್ನು ಪರಿಗಣಿಸಿ ಮರು ಜಾತಿ ಜನಗಣತಿಗೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಮರು ಸಮೀಕ್ಷೆಯನ್ನು ಸಮರ್ಥಿಸಿಕೊಂಡರು.
ಜನರ ಭಾವನೆ ಅರಿತು ಹೈಕಮಾಂಡ್ ಮರು ಜಾತಿ ಜನಗಣತಿಗೆ ಸೂಚನೆ ನೀಡಿದೆ. ಕಾಂತರಾಜು ಹಾಗೂ ಹೆಗ್ಡೆಯವರು ವೈಜ್ಞಾನಿಕವಾಗಿ ಮಾಡಿರುವ ಜಾತಿ ಜನಗಣತಿ ಮೂಲೆಗುಂಪು ಆಗುವುದಿಲ್ಲ. ವೈಜ್ಞಾನಿಕ ಅಡಿಪಾಯದ ಮೇಲೆ ಮರು ಜಾತಿ ಜನಗಣತಿ ನಡೆಯಲಿದೆ. ಒಂದೂವರೆ ಕೋಟಿ ಜನರನ್ನ ಸೇರಿಸುವ ಗಣತಿ ನಡೆಯಲಿದೆ ಎಂದು ವಿವರಿಸಿದರು.
ಭಾರತ ಸರ್ಕಾರ ಸೆನ್ಸಸ್ ಮಾಡುತ್ತಿರುವುದರಿಂದ ಮತ್ತೆ ಜಾತಿ ಜನಗಣತಿ ಯಾಕೆ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸಮೀಕ್ಷೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಕೇವಲ ಸೆನ್ಸಸ್ ಮಾತ್ರ ಮಾಡುತ್ತಿದೆ. ರಾಜ್ಯ ಸರ್ಕಾರ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿಯೂ ಮಾಡುತ್ತೆ. ಸಾಮಾಜಿಕ, ಶೈಕ್ಷಣಿಕವಾಗಿ ಸ್ಥಿತಿಗತಿ ಅಧ್ಯಯನ ಹಾಗೂ ಅಂಕಿ ಅಂಶ ಹೊರತರಲು ಹೊಸ ಜನಗಣತಿ ನಡೆಯುತ್ತಿದೆ ಎಂದರು.
ಕೊಲ್ಲೂರು ಭೇಟಿಯ ಕುರಿತು ಗೃಹ ಸಚಿವರನ್ನು ಪ್ರಶ್ನಿಸಿದಾಗ, ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನನ್ನ ವೈಯುಕ್ತಿಕ ವಿಚಾರ.ದಿಸ್ ಈಸ್ ನಾಟ್ ಅಫೀಶಿಯಲ್. ದೇವಸ್ಥಾನಕ್ಕೆ ಹೋಗೋದು ನಮ್ಮ ಸಂಪ್ರದಾಯ. ಮೂಕಾಂಬಿಕಾ ತಾಯಿಗೆ ನಮಸ್ಕಾರ ಹಾಕಿ ಬಂದಿದ್ದೇನೆ. ಯಾಕೆ ಏನು ಅಂತ ನೀವು ಕೇಳ್ಬಾರ್ದು, ನಾನು ಹೇಳ್ಬಾರ್ದು ಎಂದು ಉತ್ತರಿಸಿದರು.







