ಮಳೆ ಕೊರತೆಯಿಂದ ತೋಟಗಾರಿಕಾ ಬೆಳೆಗಳಲ್ಲಿ ಕೀಟ, ರೋಗ ಹಾವಳಿ ಹೆಚ್ಚಳ: ಕ್ಷಮಾ ಪಾಟೀಲ್
‘ಸನ್ಮತಿ’ ಬಿಡುಗಡೆ- ತೋಟಗಾರಿಕಾ ಅಧಿಕಾರಿಗಳೊಂದಿಗೆ ಸಂವಾದ

ಉಡುಪಿ, ನ.17: ಎಲ್‌ನಿನೋ ಪರಿಣಾಮವಾಗಿ ಇಂದು ಉಡುಪಿ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ.27ರಷ್ಟು ಪ್ರಮಾಣ ಕಡಿಮೆಯಾಗಿದೆ. ಇದರ ಪ್ರಭಾವ ಜಿಲ್ಲೆಯ ದೀರ್ಘಾವಧಿ ತೋಟಗಾರಿಕಾ ಬೆಳೆಗಳ ಮೇಲೆ ಯಾವ ರೀತಿ ಬೀರಿದೆ ಎಂಬುದು ಮುಂದಿನ ಜನವರಿ ತಿಂಗಳಲ್ಲಿ ಕಂಡು ಬರುವ ಸಾಧ್ಯತೆ ಇದೆ ಎಂದು ಉಡುಪಿ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗ ದೊಂದಿಗೆ ಮಂಗಳವಾರ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸನ್ಮತಿ ಪತ್ರಿಕೆಯ ಸಂಚಿಕೆ ಬಿಡುಗಡೆ ಮತ್ತು ಎಲ್ ನಿನೊ ಪ್ರಭಾವ ಮತ್ತು ತೋಟಗಾರಿಕಾ ಬೆಳೆಗಳು ಎದುರಿಸುತ್ತಿರುವ ಸವಾಲುಗಳು ಕುರಿತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಈ ಸಮಯದಲ್ಲಿ ಮಳೆ ಇಲ್ಲದೆ ಬಿಸಿಲು ಜಾಸ್ತಿಯಾದ ಪರಿಣಾಮ ತೋಟಗಾರಿಕಾ ಬೆಳೆಗಳಲ್ಲಿ ಕೀಟ ಹಾಗೂ ರೋಗಳ ಹಾವಳಿ ಜಾಸ್ತಿ ಯಾಗುತ್ತಿದೆ. ಅಡಿಕೆ ಬೇಗ ಹಣ್ಣು ಆಗಿ ಉದುರುತ್ತಿದೆ. ಅಲ್ಲದೆ ಅಡಿಕೆಯ ಗಾತ್ರದಲ್ಲಿಯೂ ಇಳಿಕೆಯಾಗಿದೆ. ಇದರಿಂದ ಇಳುವರಿ ಕೂಡ ಸಾಕಷ್ಟು ಕಡಿಮೆ ಆಗಿದೆ. ಈ ಪರಿಸ್ಥಿತಿಯಲ್ಲಿ ರೈತರಿಗೆ ತಿಳುವಳಿಕೆ ಮೂಡಿಸುವುದು ಅತೀ ಅಗತ್ಯವಾಗಿದೆ ಎಂದರು.
ಇಂತಹ ಸಂದರ್ಭದಲ್ಲಿ ನೀರಿನ ಸಂರಕ್ಷಣೆ ಅತೀ ಅಗತ್ಯವಾಗಿದೆ. ನೀರನ್ನು ಮಿತವ್ಯಯವಾಗಿ ಬಳಸಿ ಬೇಸಿಗೆಗೆ ಉಳಿಸಿಕೊಳ್ಳಬೇಕಾಗುತ್ತದೆ. ಮಳೆ ಇಲ್ಲದೆ ನೀರಿನ ಮರು ಪೂರಣ ಕೂಡ ಆಗದೆ ಬೋರ್‌ವೆಲ್‌ಗಳಲ್ಲಿಯೂ ನೀರು ಸಿಗುವುದು ಕಷ್ಟ ಆಗಬಹುದು. ನೀರಿನ ಸಂರಕ್ಷಣೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ರೈತರು ಅರಿತು ಕೊಳ್ಳಬೇಕು ಎಂದು ಅವರು ತಿಳಿಸಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಭೂಮಿಕಾ ಮಾತನಾಡಿ, ಎಲ್‌ನಿನೋ ಕಾಲಘಟ್ಟದಲ್ಲಿ ನಾವು ಕೃಷಿ, ತೋಟದ ತ್ಯಾಜ್ಯವನ್ನು ಹೊರಗೆ ಎಸೆಯದೆ ಬಹುವಾರ್ಷಿಕ ಬೆಳೆಗಳ ಬುಡಕ್ಕೆ ಹೊದಿಕೆ ಯಾಗಿದೆ ಬಳಸಿಕೊಳ್ಳಬೇಕು. ಉಡುಪಿ ಜಿಲ್ಲೆಯು ಸಾವಯವ ಜಿಲ್ಲೆ ಯಾಗಿದ್ದು, ಇಲ್ಲಿ ರಸಾನಿಯಕ ಬಳಕೆ ಕೃಷಿಯಲ್ಲಿ ಕಡಿಮೆ. ಅದನ್ನು ಉಳಿಸಿಕೊಂಡು ಹೋಗಬೇಕಾಗಿರುವ ಅನಿವಾರ್ಯತೆ ಇದೆ. ಇಂದು ಮಳೆ ಕಡಿಮೆಯಾಗಿ ವಾತಾವರಣದ ಬದಲಾವಣೆಯಿಂದ ತೋಟಗಾರಿಕಾ ಬೆಳೆಗಳ ರಸ ಹೀರುವ ಕೀಟಗಳ ಸಂಖ್ಯೆ ಜಾಸ್ತಿಯಾಗಿದೆ ಎಂದು ತಿಳಿಸಿದರು.
ಬ್ರಹ್ಮಾವರ ಜಿಕೆಎಂಎಸ್‌ನ ತಾಂತ್ರಿಕ ಸಲಹೆಗಾರ ಪ್ರದೀಪ್ ಮಾತನಾಡಿ, ಎಲ್‌ನಿನೋ ಎಂಬುದು ಪೆಸಿಫಿಕ್ ಮಹಾ ಸಾಗರದ ಉಷ್ಣವಲಯ ಪ್ರದೇಶದಲ್ಲಿ ಸಮುದ್ರದ ಮೇಲ್ಮೈ ನೀರಿನ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗುವ ನೈಸರ್ಗಿಕ ಹವಾಮಾನ ವಿದ್ಯಾಮಾನ ಆಗಿದ್ದು, ಇದರಿಂದ ಜಗತ್ತಿನ ಹವಾಮಾನ ವ್ಯವಸ್ಥೆ ಮೇಲೆ ಸಾಕಷ್ಟು ಪರಿಣಾಮ ಉಂಟಾಗುತ್ತದೆ. ಭಾರತದಲ್ಲಿ ಮುಂಗಾರು ಮಳೆ ಕಡಿಮೆ ಆಗಿ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಇದು ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೇಲೆ ಹೊಡೆತ ಬೀಳುತ್ತದೆ ಎಂದರು.
ಎಲ್‌ನಿನೋ ಪರಿಣಾಮ 2027ರ ಜನವರಿವರೆಗೂ ಇದರ ಪರಿಣಾಮ ಇರುತ್ತದೆ. ವಾಜಿಕೆ ಮಳೆಗಿಂತ ಕ್ರಮೇಣ ಕಡಿಮೆ ಮಳೆಯಾಗುತ್ತದೆ. ಅದೇ ರೀತಿ ಈ ಬಾರಿ ನಮ್ಮಲ್ಲಿ ಚಂಡಮಾರುತ ಕೂಡ ಕಡಿಮೆ ಆಗಿದೆ. ಇದರ ಪರಿಣಾಮವಾಗಿ ಕರಾವಳಿಯಲ್ಲೂ ವಾಡಿಕೆಗಿಂತ ಅತೀ ಕಡಿಮೆ ಮಳೆ ಯಾಗುವ ಸಂದರ್ಭದಲ್ಲಿ ನಾವು ಇದ್ದೇವೆ. ಎಲ್‌ನಿನೋ ಒಂದರಿಂದ ಒಂದೂವರೆ ವರ್ಷಗಳವರೆಗೂ ಮುಂದುವರೆಯುವ ಸಾಧ್ಯತೆ ಇದೆ. 1960ರಲ್ಲಿ ಸಂಭವಿಸಿದ ಎಲ್‌ನಿನೋ ಪರಿಣಾಮಗಿಂತ ಭೀಕರವಾಗಿರುವ ಆತಂಕ ಎದುರಾಗಿದೆ. ಮುಂದಿನ ದಿನಗಳಲ್ಲಿ ಚಂಡಮಾರುತಗಳು ಬಂದರೆ ಮಳೆಯಾಗುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದರು.
ಉಡುಪಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೇಮಂತ್ ಕುಮಾರ್ ಎಲ್., ಸಹಾಯಕ ತೋಟಗಾರಿಕಾ ನಿರ್ದೇಶಕ ನಿಧೀಶ್ ಹೊಳ್ಳ, ವಾರ್ತಾಧಿಕಾರಿ ಎಂ.ಮಂಜುನಾಥ್, ಉಡುಪಿ ಪತ್ರಿಕಾ ಭವನ ಸಮಿತಿಯ ಸಹ ಸಂಚಾಲಕ ಗಣೇಶ್ ಕಲ್ಯಾಣಪುರ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಪತ್ರಕರ್ತ ಪುಂಡಲೀಕ ಮರಾಠೆ ಕಾರ್ಯಕ್ರಮ ನಿರೂಪಿಸಿದರು.






