ಕುಂದಾಪುರ: ಪೌರ ಕಾರ್ಮಿಕರ ಅನಿರ್ಧಿಷ್ಟಾವಧಿ ಧರಣಿ 5ನೇ ದಿನಕ್ಕೆ
ಕುಂದಾಪುರ: ಇಲ್ಲಿನ ಪುರಸಭೆ ಎದುರು ಪೌರಕಾರ್ಮಿಕರು, ಪೌರ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಶುಕ್ರವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.
ಪ್ರತಿಭಟನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ, ಪೌರಾಡಳಿತ ಸಚಿವರನ್ನು ಸಂಪರ್ಕಿಸಲು ಮಾಡಿದ ಯತ್ನ ವಿಫಲವಾಗಿದೆ. ಇನ್ನೊಮ್ಮೆ ಪ್ರಯತ್ನಿಸಿ ಮಾತಾಡುವೆ. ಕೇಳಿದ ಅನೇಕ ಬೇಡಿಕೆಗಳು ಈಡೇರಿಸಲು ಸಾಧ್ಯವಿರು ವಂತದ್ದೇ ಆಗಿದೆ. ಕೆಲವನ್ನು ನಿಧಾನಕ್ಕೆ ಈಡೇರಿಸಬಹುದು. ಆದ್ದರಿಂದ ಸರಕಾರ ವಿಳಂಬ ಮಾಡುವುದು ಸರಿಯಲ್ಲ ಎಂದರು.
ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ನಿವೃತ್ತ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ಶ್ರೀಧರ ಶೇರೆಗಾರ್, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಮೊದಲಾದವರು ಇದ್ದರು. ಪುರಸಭೆಯ ಸೂರ್ಯಕಾಂತ್, ಗುರುಪ್ರಸಾದ್ ಶೆಟ್ಟಿ, ರಾಘವೇಂದ್ರ, ಗಣೇಶ್ ಜನ್ನಾಡಿ ಮೊದಲಾದವರು ಮನವಿ ನೀಡಿದರು.
ಉಡುಪಿಯಲ್ಲೂ ಧರಣಿ:ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಕರೆಯಂತೆ ಕಳೆದ ಮೇ 27ರಿಂದ ಉಡುಪಿ ನಗರಸಭೆಯ ಪೌರ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರಸಭೆ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಇಂದು ನಾಲ್ಕು ದಿನಗಳನ್ನು ಪೂರ್ಣ ಗೊಳಿಸಿದೆ.
ಧರಣಿ ಸ್ಥಳಕ್ಕೆ ಇಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಭೇಟಿ ನೀಡಿ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿ ತಮ್ಮ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ನಗರಸಭಾ ಸದಸ್ಯ ರಮೇಶ್ ಕಾಂಚನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







