ಅಂತಾರಾಷ್ಟ್ರೀಯ ಸಂಬಂಧಗಳ ಕುರಿತು ಭಾರತಕ್ಕೆ ತನ್ನದೇ ದೃಷ್ಠಿಕೋನದ ಅಗತ್ಯವಿದೆ: ಪ್ರೊ.ವಿಜಯಲಕ್ಷ್ಮೀ

ಮಣಿಪಾಲ, ಅ.13: ಅಂತಾರಾಷ್ಟ್ರೀಯ ಸಂಬಂಧಗಳ ಪಾಶ್ಚಿಮಾತ್ಯೇತರ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುವ ಮತ್ತು ಭಾರತವು ಅಂತಾರಾಷ್ಟ್ರೀಯ ಸಂಬಂಧಗಳ ಕುರಿತು ತನ್ನದೇ ಆದ ದೃಷ್ಟಿಕೋನವನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಮಾಹೆಯ ಜಿಯೋಪಾಲಿಟಿಕ್ಸ್ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಪಿ.ವಿಜಯಲಕ್ಷ್ಮಿ ಹೇಳಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ನಡೆದ ’ಟ್ರೇಸಿಂಗ್ ದಿ ಟ್ರಾಜೆಕ್ಟರಿ: ಇಂಟರ್‌ನೇಷನಲ್ ರಿಲೇಶನ್ಸ್ ಫ್ರಂ ಇಂಡಿಯನ್ ಪರ್ಸ್ಪೆಕ್ಟಿವ್’ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು.
‘ನಾನ್-ವೆಸ್ಟೆರ್ನ್’ ಎಂದರೆ ಪಾಶ್ಚಿಮಾತ್ಯ ವಿರೋಧಿ ಎಂದಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅಲಿಪ್ತ ನೀತಿಯು ಅಂತಾರಾಷ್ಟ್ರೀಯ ಸಂಬಂಧಗಳ ಜಗತ್ತಿಗೆ ಭಾರತ ನೀಡಿದ ಪ್ರಮುಖ ಕೊಡುಗೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಅಂತಾರಾಷ್ಟ್ರೀಯ ಸಂಬಂಧ (ಐಆರ್) ವಿಕಾಸದ ವಿವಿಧ ಹಂತಗಳನ್ನು ವಿವರಿಸಿದ ಪ್ರೊ.ವಿಜಯಲಕ್ಷ್ಮಿ, ಐಆರ್ ಎರಡನೇ ಮಹಾಯುದ್ಧದ ನಂತರ ಪ್ರಾಥಮಿಕವಾಗಿ ಯುದ್ಧಗಳನ್ನು ತಪ್ಪಿಸಲು ಆರಂಭವಾದ ಶೈಕ್ಷಣಿಕ ವಿಭಾಗವಾಗಿದೆ. ಐಆರ್ ಸಿದ್ಧಾಂತಿಗಳು ವಾಸ್ತವಿಕತೆ ಮತ್ತು ಆದರ್ಶವಾದದ ನಡುವೆ ಸಿಲುಕಿಕೊಂಡಿದ್ದಾರೆ. ಇಂದು, ಐಆರ್ ಅಧ್ಯಯನದಲ್ಲಿ ವಿವಿಧ ಕಲೆಗಳನ್ನು ಸಾಫ್ಟ್ ಪವರ್ ಎಂದು ಪರಿಗಣಿಸಬಹುದು ಎಂದರು.
ಆರಂಭದಲ್ಲಿ ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಆಂತರಿಕ ಶಾಂತಿಯಿಂದ ಅಂತಾರಾಷ್ಟ್ರೀಯ ಶಾಂತಿಯವರೆಗೆ ಸಾಗಲು ಕಲಾಪ್ರಕಾರಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ನಮ್ಮ ವಿಭಾಗವು ಪರಿಶೋಧಿಸುತ್ತದೆ ಎಂದು ಹೇಳಿದರು.
ರಾಜಕೀಯ ಶಾಸ್ತ್ರಜ್ಞ ಡಾ.ರಾಜಾರಾಮ್ ತೋಳ್ಪಾಡಿ ಮಾತನಾಡಿ, ಐಆರ್‌ನಲ್ಲಿ ವಾಸ್ತವಿಕತೆಯ ಹೊರತಾಗಿ ವಿಭಿನ್ನ ಸಿದ್ಧಾಂತಗಳನ್ನು ಅರ್ಥ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಬಳಿಕ ಜಿಸಿಪಿಎಎಸ್ ಮತ್ತು ಡಿಜಿಐಆರ್ ವಿದ್ಯಾರ್ಥಿಗಳು ವಿಷಯದ ಕುರಿತು ಸಂವಾದ ನಡೆಸಿದರು.







