ಒಂದು ತಿಂಗಳೊಳಗೆ ಎಲ್ಲಾ ಬಸ್, ಲಾರಿಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಿ: ಸಾರಿಗೆ ಅಧಿಕಾರಿಗಳಿಗೆ ಉಡುಪಿ ಡಿಸಿ ಸೂಚನೆ

ಉಡುಪಿ, ಸೆ.23: ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಬಸ್ ಹಾಗೂ ಲಾರಿಗಳಿಗೆ ಮುಂದಿನ ಒಂದು ತಿಂಗಳಿನೊಳಗೆ ಸ್ಪೀಡ್ ಗವರ್ನರ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಒಟ್ಟು 3785 ಬಸ್‌ಗಳು ಹಾಗೂ 6 ಚಕ್ರ ಮೇಲ್ಪಟ್ಟ ಸರಕು ಸಾಗಾಣಿಕೆ ವಾಹನಗಳಿದ್ದು, ಇವುಗಳಲ್ಲಿ 1952 ವಾಹನಗಳಿಗೆ ವೇಗ ನಿಯಂತ್ರಕಗಳನ್ನು ಈಗಾಗಲೇ ಅಳವಡಿಸಲಾಗಿದೆ. ಕಳೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಎಲ್ಲಾ ವಾಹನಗಳಿಗೂ ವೇಗ ನಿಯಂತ್ರಕ ಅಳವಡಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿ ಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ಇನ್ನೂ 1,800ಕ್ಕೂ ಅಧಿಕ ವಾಹನಗಳು ಸ್ಪೀಡ್ ಗವರ್ನರ್ ಅಳವಡಿಕೆಗೆ ಬಾಕಿ ಇದೆ. ಆದ್ದರಿಂದ ಮುಂದಿನ ಒಂದು ತಿಂಗಳ ಒಳಗಾಗಿ ಪ್ರತಿಯೊಂದು ವಾಹನಕ್ಕೂ ಸ್ಪೀಡ್ ಗವರ್ನರ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ವಾಹನಗಳು ಓವರ್ ಲೋಡ್‌ನೊಂದಿಗೆ ಸಂಚರಿಸುತ್ತಿರುವುದರಿಂದ ಕಾಂಕ್ರಿಟ್ ಮಿಕ್ಸ್ ರಸ್ತೆ ಮೇಲೆ ಎಲ್ಲೆಂದರಲ್ಲಿ ಬಿದ್ದು ರಸ್ತೆ ಹಾಳಾಗುತ್ತಿದೆ. ಅದೇ ರೀತಿ ಮರಳು ಸಾಗಾಣಿಕೆ ವಾಹನಗಳ ಓವರ್ ಲೋಡ್‌ನಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಜೊತೆಗೆ ಅಪಘಾತ ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಈ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ 1569 ವಾಹನಗಳ ತಪಾಸಣೆ ನಡೆಸಿ, 15 ಪ್ರಕರಣಗಳನ್ನು ದಾಖಲಿಸಿ, 3.33 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಪಾಸಣೆಯನ್ನು ತೀವ್ರಗೊಳಿ ಸುವಂತೆ ಸ್ವರೂಪ ಟಿ.ಕೆ. ಸೂಚಿಸಿದರು.
ರಸ್ತೆಗಳ ಅಭಿವೃದ್ಧಿ: ಜಿಲ್ಲಾ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ರಸ್ತೆಗಳಲ್ಲಿ ಜನಸಾಮಾನ್ಯರ ವಾಹನಗಳು ಸುರಕ್ಷಿತ ವಾಗಿ ಸಂಚರಿಸಲು ಅಗತ್ಯವಿರುವ ಎಲ್ಲಾ ರಸ್ತೆ ಅಭಿವೃದ್ಧಿ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ, ಈ ಮೂಲಕ ವಾಹನ ಅಪಘಾತಗಳ ಪ್ರಕರಣಗಳು ಕಡಿಮೆಯಾಗುವಂತೆ ಸೂಕ್ತ ಕ್ರಮವಹಿಸಬೇಕು ಎಂದು ಅವರು ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಾರ್ವಜನಿಕ ವಾಹನಗಳು ಸಂಚರಿಸುವಾಗ ಪ್ರಾಧಿಕಾರದ ವತಿಯಿಂದ ನಗರ ಹಾಗೂ ನಗರದ ಹೊರ ವಲಯದಲ್ಲಿ ವಾಹನಗಳಿಗೆ ವೇಗದ ಮಿತಿ ಯನ್ನು ನಿಗದಿಪಡಿಸಿದ್ದು, ಇದನ್ನು ಎಲ್ಲರೂ ಪಾಲಿಸಬೇಕು. ರಸ್ತೆ ಸುರಕ್ಷತಾ ನಿಯಮ ಗಳನ್ನು ಸಹ ಚಾಚೂ ತಪ್ಪದೇ ಪಾಲಿಸಿದ್ದಲ್ಲಿ ಅಪಘಾತ ಪ್ರಕರಣಗಳು ಕಡಿಮೆಯಾಗಲು ಸಾಧ್ಯ. ಎಲ್ಲರೂ ಇದಕ್ಕೆ ವಿಶೇಷ ಒತ್ತು ನೀಡಬೇಕು ಎಂದರು.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಅನಧಿಕೃತವಾಗಿರುವ ಗೂಡಂಗಡಿ, ಫಾಸ್ಟ್ ಫುಡ್ ಸೆಂಟರ್, ತಳ್ಳುಗಾಡಿ ಹಾಗೂ ಗೂಡಂಗಡಿಗಳನ್ನು ಈಗಾಗಲೇ ನಗರಸಭಾ ವ್ಯಾಪ್ತಿಯಲ್ಲಿ ಗುರುತಿಸಲಾದ 6 ವೆಂಡಿಂಗ್ ಝೋನ್‌ಗಳಿಗೆ ಸ್ಥಳಾಂತರಿಸಬೇಕು ಎಂದ ಜಿಲ್ಲಾಧಿಕಾರಿ, ಸದ್ರಿ ಝೋನ್ ಗಳಲ್ಲಿ ಶೀಘ್ರವಾಗಿ ಶೆಲ್ಟರ್‌ಗಳನ್ನು ನಿರ್ಮಿಸುವಂತೆ ಅವರು ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ರಮುಖ 5 ಜಂಕ್ಷನ್‌ಗಳಿದ್ದು, ಅವುಗಳಲ್ಲಿ ಕಲ್ಸಂಕ ಮತ್ತು ಮಣಿಪಾಲ ಸಿಂಡಿಕೇಟ್ ಸರ್ಕಲ್ ಜಂಕ್ಷನ್‌ನಲ್ಲಿ ಈಗಾಗಲೇ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಬಾಕಿ ಉಳಿದ ಜಂಕ್ಷನ್ ಹಾಗೂ ಜಿಲ್ಲೆಯ ಪಡುಬಿದ್ರೆ, ಕೋಟಾ, ಬ್ರಹ್ಮಾವರ ಹಾಗೂ ಕುಂದಾಪುರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸು ವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಶಾಲಾ-ಕಾಲೇಜುಗಳ ಪರಿಮಿತಿಯ ರಸ್ತೆಗಳಲ್ಲಿ ಸೂಚನಾ ಫಲಕಗಳು, ವೇಗತಡೆ ಉಬ್ಬುಗಳು, ಬ್ಯಾರಿಕೇಡ್, ಝೀಬ್ರಾ ಪಟ್ಟಿ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ರಸ್ತೆ ಅಪಘಾತದ ಸಾಧ್ಯತೆ ಇರುವ ಸ್ಥಳಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸೂಚನಾ ಫಲಕ, ಹಂಪ್ಸ್, ಬೀದಿ ದೀಪಗಳನ್ನು ಅಳವಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಕಾಮಗಾರಿಗೆ ಅನುಕೂಲವಾಗುವ ಉದ್ದೇಶದಿಂದ ಕೆಲವು ರಸ್ತೆ ವಿಭಜಕಗಳನ್ನು ಬಿಟ್ಟಿದ್ದು, ಕಾಮಗಾರಿ ಪೂರ್ಣಗೊಂಡರೂ ಅವುಗಳು ತೆರೆದಿವೆ. ಅವುಗಳನ್ನು ಮುಚ್ಚು ವಂತೆ ತಿಳಿಸಿದ ಜಿಲ್ಲಾಧಿಕಾರಿ, ರಸ್ತೆ ವಿಭಜಕಗಳು ಬೇಕೆಂದು ಜನರಿಂದ ಮನವಿ ಬಂದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಭಿಯಂತರರು ಜಂಟಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯವಿದ್ದಲ್ಲಿ ವಿಭಜಕಗಳನ್ನು ಅಳವಡಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಪೌರಾಯುಕ್ತ ಮಹಾಂತೇಶ ಹಂಗರಗಿ, ಲೋಕೋಪ ಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಅಭಿಯಂತರರುಗಳು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
2 ತಿಂಗಳಲ್ಲಿ ಎಲ್ಲಾ ಬಸ್‌ಗಳಿಗೆ ಬಾಗಿಲು ಅಳವಡಿಕೆ
ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳಲ್ಲಿ ಕಡ್ಡಾಯವಾಗಿ ಬಾಗಿಲುಗಳನ್ನು ಅಳವಡಿಸಿ ರುವ ಕುರಿತು ಪರಿಶೀಲಿಸುವಂತೆ ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿದ್ದರೂ, ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ಅಸಮಧಾನ ವ್ಯಕ್ತಪಡಿಸಿದರು.
ಇನ್ನು ಎರಡು ತಿಂಗಳ ಒಳಗೆ ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಿಗೆ ಡೋರ್ ಅಳವಡಿಸಿರುವ ಕುರಿತು ಮಾಹಿತಿ ನೀಡುವಂತೆ ಆರ್.ಟಿ.ಓ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಬಸ್‌ಗಳಲ್ಲಿ ಕಸದ ಬುಟ್ಟಿ
ಸಾರ್ವಜನಿಕರು ಬಸ್‌ಗಳಲ್ಲಿ ಸಂಚರಿಸುವಾಗ ನೀರಿನ ಬಾಟಲ್ ಸೇರಿದಂತೆ ವಿವಿಧ ವಸ್ತುಗಳನ್ನು ರಸ್ತೆಗೆ ಎಸೆಯು ತ್ತಾರೆ. ಇದರಿಂದ ರಸ್ತೆಯ ಮೇಲೆ ಸಂಚರಿಸುವ ಇತರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದರ ಜೊತೆಗೆ ಅನೈರ್ಮಲ್ಯ ಉಂಟಾಗುತ್ತದೆ. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಸ್ಸಿನಲ್ಲಿಯೇ ಕಸದ ಬುಟ್ಟಿಗಳನ್ನು ಅಳವಡಿಸುವಂತೆ ಹಿಂದಿನ ಸಭೆಯಲ್ಲಿ ಸೂಚನೆ ನೀಡಲಾಗಿದ್ದರೂ ಸಹ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಆದಷ್ಟು ಶೀಘ್ರವಾಗಿ ಎಲ್ಲಾ ಬಸ್‌ಗಳಲ್ಲಿಯೂ ಕಸದ ಬುಟ್ಟಿ ಇರಿಸಿ, ವರದಿ ನೀಡುವಂತೆ ಕೆಎಸ್ಸಾರ್ಟಿಸಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.






