ಬಿವಿಟಿಯಿಂದ ಮೇಘಾಲಯದಲ್ಲಿ ಸೌರ ಚಾಲಿತ ಇ-ಸೈಕಲ್ ಚಾರ್ಜಿಂಗ್ ಸ್ಟೇಶನ್ ಸ್ಥಾಪನೆ

ಮಣಿಪಾಲ, ಅ.6: ಈಶಾನ್ಯ ಭಾರತದ ಮೇಘಾಲಯ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಸಿನಿ ಟಾಟಾ ಟ್ರಸ್ಟ್ ಜಮ್‌ಷೆದ್‌ಪುರ (ಕಲೆಕ್ಟಿವ್ಸ್ ಫಾರ್ ಇಂಟಿಗ್ರೇಟೆಡ್ ಲೈವ್ಲಿಹುಡ್ ಇನಿಶೇಟಿವ್ಸ್) ಯೋಜನೆಯ ಮೂಲಕ ಮೇಘಾಲಯದ ಸೋಹ್ರಾದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ನೂತನ ಇ-ಸೈಕಲ್ ಚಾರ್ಜಿಂಗ್ ಸ್ಟೇಶನ್ ಸೇವೆಯನ್ನು ಪ್ರಾರಂಭಿಸಲಾಗಿದೆ.
ಈ ಸೇವೆಯನ್ನು ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯ ಶಾಸಕರಾದ ಗಾವಿನ್ ಮಿಗೆನ್ ಮೈಲಿಯಂ ಉದ್ಘಾಟಿಸಿ, ಈ ಯೋಜ ನೆಯು ಸೋಹ್ರಾ ಗ್ರಾಮದ ಪ್ರವಾಸೋದ್ಯಮಕ್ಕೆ ಉತ್ತಮ ಕೊಡುಗೆಯನ್ನು ನೀಡುವುದರ ಜೊತೆಗೆ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದರು.
ಇದರಿಂದ ದೇಶದ ನಾನಾ ಭಾಗಗಳಿಂದ ರಾಜ್ಯಕ್ಕೆ ಆಗಮಿಸುವ ಆಸಕ್ತ ಪ್ರವಾಸಿಗರು ಪ್ರವಾಸಿ ತಾಣಗಳನ್ನು ಭೇಟಿ ಮಾಡಲು ಸೋಹ್ರಾ (ಚಿರಾಪುಂಜಿ) ವಿದ್ಯುತ್ ಮೂಲಕ ಚಾರ್ಜ್ ಮಾಡಲಾದ ಇ-ಸೈಕಲ್‌ಗಳನ್ನು ಬಾಡಿಗೆಗೆ ಪಡೆಯ ಬಹುದಾಗಿದೆ.
ಸಿನಿ ಟಾಟಾ ಟ್ರಸ್ಟ್, ಬುಡಕಟ್ಟು ಸಮುದಾಯ, ಅರಣ್ಯ ಆಧಾರಿತ ಜೀವನೋಪಾಯಗಳು, ಜಲ ಸಂಪನ್ಮೂಲ ಅಭಿವೃದ್ಧಿ, ಕುಡಿಯುವ ನೀರು ಮತ್ತು ನೈರ್ಮಲ್ಯ, ಕಿರುಬಂಡವಾಳ ಮತ್ತು ಸಮುದಾಯ ಆಧಾರಿತ ಸಂಸ್ಥೆಗಳನ್ನು ಬಲಪಡಿಸುವುದು ಮುಂತಾದ ಕಾರ್ಯಕ್ಷೇತ್ರಗಳಲ್ಲಿ ಜನರ ಜೀವನಮಟ್ಟ ಸುಧಾರಿಸುವ ಉದ್ದೇಶವನ್ನು ಹೊಂದಿದೆ.
ಮೇಘಾಲಯದ ಪ್ರಸಿದ್ಧ ಪ್ರವಾಸಿ ತಾಣ ನೋಹಾಲಿಕೈ ಜಲಪಾತ, ಸೋಹಸ್ ಗಿಥಿಯಾಂಗ್ ವ್ಯೆಪಾಯಿಂಟ್ ಅಲ್ಲದೇ ಇತರ ಗಿರಿಶಿಖರಗಳನ್ನು ಸಂದರ್ಶಿಸಲು ಪ್ರವಾಸಿಗರಿಗೆ ಸುಲಭ ಸಾಧ್ಯವಾಗುವಂತೆ ಹಲವಾರು ಇ-ಸೈಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಪ್ರವಾಸಿ ತಾಣಗಳ ಉದ್ದಕ್ಕೂ ಆಯಕಟ್ಟಿನ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತಿದೆ. ಪ್ರವಾಸಿಗರು ಸುಲಭವಾಗಿ ಇ-ಸೈಕಲ್‌ಗಳನ್ನು ಬಾಡಿಗೆಗೆ ಪಡೆದು ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಸೈಕಲ್‌ನ್ನು ಹಿಂದಕ್ಕೆ ನೀಡಬಹುದಾಗಿದೆ. ಸೊಹ್ರಾದ ಖ್ಲೀಹ್ಶ್ನಾಂಗ್ ಗ್ರಾಮದಲ್ಲಿ ಮೊದಲ ಇ-ಸೈಕಲ್ ಸರ್ಕ್ಯೂಟ್ ಸೇವೆಗಳನ್ನು ಪ್ರಾರಂಭಿಸಲಾಯಿತು.
ಪ್ರವಾಸೋದ್ಯಮಕ್ಕೆ ಪೂರಕವಾದ ಸ್ಟಾರ್ಟ್‌ಅಪ್ ಶಾಂಘೈ ಹೆಸರಿನ ಸೇವೆಯನ್ನು ಸ್ಥಳೀಯ ಸೌರಮಂಡಲ ಫೌಂಡೇಶನ್ ಮತ್ತು ಪೈಮ್-ಸೌರಮಂಡಲ ರೂರಲ್ (ಪಿಎಸ್‌ಆರ್‌ಇಎಫ್) ಸಂಸ್ಥೆಗಳು, ಸಿನಿ ಟಾಟಾ ಟ್ರಸ್ಟ್ ಜೆಮ್‌ಷೆದ್‌ಪುರ ಮತ್ತು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಸಹಕಾರದಿಂದ ಅನುಷ್ಠಾನಗೊಳಿಸಿದೆ.







