ಸಂವಿಧಾನದ ಮೂಲ ಆಶಯ ಯುವ ಪೀಳಿಗೆಗೆ ತಿಳಿಸುವುದು ಅಗತ್ಯ: ಪ್ರೊ.ಸುರೇಂದ್ರನಾಥ್ ಶೆಟ್ಟಿ

ಬ್ರಹ್ಮಾವರ, ಜ.27: ಭಾರತೀಯ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿ ನಿಂತಿರುವ ಲಿಖಿತ ಸಂವಿಧಾನ. ಭಾರತೀಯ ಸಂವಿಧಾನದ ಮೂಲ ಆಶಯಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದ್ದಾರೆ.
ಬ್ರಹ್ಮಾವರದ ಜಿ.ಎಂ.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಮತ್ತು ಜಿ.ಎಂ. ಗ್ಲೋಬಲ್ ಸ್ಕೂಲ್ ಜಂಟಿಯಾಗಿ ಹಮ್ಮಿ ಕೊಂಡ 77ನೇ ಗಣರಾಜ್ಯೋತ್ಸವ ದಲ್ಲಿ ಧ್ವಜಾರೋಹಣಗೈದು ಅವರು ವಿಶೇಷ ಉಪನ್ಯಾಸ ನೀಡಿದರು.
ವಿಶ್ವದಲ್ಲಿಯೇ ಅತೀ ದೊಡ್ಡ ಹಾಗೂ ಪರಿಪಕ್ವ ಪ್ರಜಾಪ್ರಭುತ್ವ ವ್ಯವಸ್ಥೆ ಮೈಗೂಡಿಸಿಕೊಂಡು ಬೆಳೆಯುತ್ತಿರುವ ದೇಶ ಅನ್ನುವ ಹೆಗ್ಗಳಿಕೆ ಭಾರತಕ್ಕಿದೆ. ವಿವಿಧತೆಯಲ್ಲಿಯೇ ಏಕತೆಯ ಬದುಕನ್ನು ಮೈಗೂಡಿಸಿಕೊಂಡು ಸಹಭಾಗಿತ್ವದಲ್ಲಿ ಬದುಕುವುದೆ ನಮ್ಮ ಅತಿ ದೊಡ್ಡ ಶಕ್ತಿ ಎಂಬುದನ್ನು ನಾವು ಖಂಡಿತವಾಗಿಯೂ ಮರೆಯುವಂತಿಲ್ಲ ಎಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ವಹಿಸಿದ್ದರು. ಪ್ರಾಂಶುಪಾಲೆ ದೀಪ್ತಿ ಶೆಟ್ಟಿ ಗಣರಾಜ್ಯೋತ್ಸವದ ಮಹತ್ವದ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಹಿರಿಯ ಶಿಕ್ಷಕ ಸ್ಯೆಬೇಸ್ಟಿನ್ ಸಂವಿಧಾನದ ಪೀಠಿಕೆಯನ್ನು ಬೇೂಧಿಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಡಾ.ಅನೂಷ ಸುಬ್ರಹ್ಮಣ್ಯಂ, ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಣವ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪರವಾಗಿ ಅನುಜಾ ಶೆಟ್ಟಿ ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿನಿ ಮಾನ್ಯ ಪೈ ಸ್ವಾಗತಿಸಿ ಮಂಜುಶ್ರೀ ವಂದಿಸಿದರು.







