‘ಆದರ್ಶ ನೆರೆಹೊರೆ, ಆದರ್ಶ ಸಮಾಜ’: ನಾಳೆಯಿಂದ ಜಮಾಅತ್ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಭಿಯಾನ

ಉಡುಪಿ: ನಾಳೆಯಿಂದ (ನ.21) ಜಮಾಅತ್ ಇಸ್ಲಾಮೀ ಹಿಂದ್ ವತಿಯಿಂದ ದೇಶಾದ್ಯಂತ ‘ನೆರೆಹೊರೆಯವರ ಹಕ್ಕುಗಳು’ ಎಂಬ ಶೀರ್ಷಿಕೆ ಯಡಿ ಹತ್ತುದಿನಗಳ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರಂತೆ ಉಡುಪಿ ಜಿಲ್ಲೆಯಾದ್ಯಂತ ವಿವಿದೆಡೆಗಳಲ್ಲಿ ನ.21ರಿಂದ 30ರವರೆಗೆ ಈ ಅಭಿಯಾನ ನಡೆಯಲಿದೆ ಎಂದು ಜಮಾಅತ್ ಇಸ್ಲಾಮಿ ಹಿಂದ್‌ನ ಉಡುಪಿ ನಗರ ಶಾಖೆ ಅಧ್ಯಕ್ಷ ನಿಸಾರ್ ಅಹಮ್ಮದ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆದರ್ಶ ನೆರೆಹೊರೆ, ಆದರ್ಶ ಸಮಾಜ ಎಂಬ ಘೋಷ ವಾಕ್ಯದಡಿ ಈ ಬಾರಿಯ ಅಭಿಯಾನ ನಡೆಯಲಿದ್ದು, ನೆರೆಹೊರೆಯವರೊಂದಿಗೆ ಸದ್ವರ್ತನೆ ಮತ್ತು ಸದ್ಭಾವನೆಯ ಮನೋಭಾವವನ್ನು ಪುನರುಜ್ಜೀವಗೊಳಿಸಿ, ಪರಸ್ಪರ ಸಂಬಂಧಗಳನ್ನು ಮತ್ತಷ್ಟು ಸುಧೃಡಗೊಳಿಸುವುದು ಈ 10 ದಿನಗಳ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಇಸ್ಲಾಂ ನೆರೆಹೊರೆಯವರ ಹಕ್ಕುಗಳಿಗೆ ಅಪಾರ ಮಹತ್ವ ನೀಡುತ್ತದೆ. ನಾವು ವಾಸಿಸುವ ಸ್ಥಳದ ಸಮೀಪ ವಾಸಿಸುವವರಷ್ಟೇ ಅಲ್ಲದೆ, ಪ್ರತಿದಿನ ನಮ್ಮೊಂದಿಗಿರುವ ಸಹೋದ್ಯೋಗಿಗಳು, ಸಹಪ್ರಯಾಣಿಕರು, ಪ್ರತಿದಿನ ಎದುರಾಗುವ ಜನಸಾಮಾನ್ಯರು ಸಹ ನೆರೆಹೊರೆ ಎನಿಸಿಕೊಳ್ಳಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಉಡುಪಿ, ಕಾಪು, ಗಂಗೊಳ್ಳಿ, ಹೂಡೆ ಸೇರಿದಂತೆ ವಿವಿದೆಡೆಗಳಲ್ಲಿ ನಡೆಯಲಿದೆ. ಉಡುಪಿಯ ಕಾರ್ಯಕ್ರಮ ನ.25ರಂದು ಹೊಟೇಲ್ ಕಿದಿಯೂರಿನಲ್ಲಿ ನಡೆಯಲಿದೆ. ಅಭಿಯಾನದ ವೇಳೆ ಸ್ವಚ್ಛತೆ, ಪರಿಸರ ಉಳಿಸಲು ಸಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಪೌರಕಾರ್ಮಿಕರಿಗೆ ಸನ್ಮಾನ, ಯುವಜನತೆಗೆ ವಿಶೇಷ ಕಾಯಕ್ರಮ, ಸಮುದಾಯ ಸ್ವಚ್ಛತಾ ಕಾರ್ಯ, ರಸ್ತೆ ಹಕ್ಕುಗಳ ಜಾಗೃತಿ ರ್ಯಾಲಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಉಡುಪಿಯ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ಸಂವಾದ ನಡೆಯಲಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಸಂಚಾಲಕ ನಿಹಾಲ್ ಕಿದಿಯೂರ್, ಜಮಾಅತ್ ಹಿಂದ್ ಇಸ್ಲಾಮಿನ ವಕ್ತಾರ ಇದ್ರಿಸ್ ಹೂಡೆ, ಫಾರೂಕ್ ಆತ್ರಾಡಿ, ಅಬ್ದುಲ್ ಖಾದರ್ ಹೂಡೆ, ಅನ್ವರ್ ಅಲಿ ಕಾಪು ಮುಂತಾದವರು ಉಪಸ್ಥಿತರಿದ್ದರು.







