ಜ.31, ಫೆ.1: ಮಂಗಳೂರಿನಲ್ಲಿ ಆಯುಷ್ ಹಬ್ಬ-2026

ಉಡುಪಿ, ಜ.27: ಭಾರತೀಯ ಪರಂಪರೆಯ ವೈದ್ಯ ಪದ್ಧತಿಗಳ ಮಹಾಸಂಭ್ರಮ ‘ಆಯುಷ್ ಹಬ್ಬ-2026’ ಜ.31 ಹಾಗೂ ಫೆ.1ರಂದು ಎರಡು ದಿನಗಳ ಕಾಲ ಮಂಗಳೂರಿನ ಡಾ.ಟಿ.ಎಂ.ಎ.ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಆಯುಷ್ ಹಬ್ಬ ಸಮಿತಿಯ ಗೌವರಾಧ್ಯಕ್ಷೆ ಡಾ.ಆಶಾಜ್ಯೋತಿ ರೈ ಮಾಲಾಡಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ಆಯುಷ್ ಸಂಘಟನೆಗಳು, ಆಯುಷ್ ಆಸ್ಪತ್ರೆಗಳು, ಆಯುಷ್ ಕಾಲೇಜುಗಳು ಹಾಗೂ ವೃತ್ತಿ ನಿರತ ಆಯುಷ್ ವೈದ್ಯರ ಸಂಘಟನೆಗಲ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಈ ಆಯುಷ್ ಹಬ್ಬವನ್ನು ಆಯೋಜಿಸಲಾಗಿದೆ ಎಂದರು.
ಭಾರತೀಯ ಪರಂಪರೆಯ ವೈದ್ಯ ಪದ್ಧತಿಗಳಾದ ಆಯುರ್ವೇದ, ಯೋಗ ಮತ್ತು ನೇಚರೋಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿಗಳ ಕುರಿತು ಚರ್ಚೆ, ಸಂವಾದ, ಪ್ರಾತ್ಯಕ್ಷಿಕೆ ಮುಂತಾದ ಕಾರ್ಯಕ್ರಮಗಳಿರುತ್ತವೆ ಎಂದು ಕಾರ್ಯಕ್ರಮದ ಉಡುಪಿ ಜಿಲ್ಲಾ ಸಂಚಾಲಕ ಡಾ.ನಾರಾಯಣ ಟಿ.ಅಂಚನ್ ತಿಳಿಸಿದರು.
ಇದರಲ್ಲಿ ಮಕ್ಕಳಿಗೆ ಮಕ್ಕಳ ಹಬ್ಬ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ, ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ವಿಶೇಷ ಮಾಹಿತಿ ಕಾರ್ಯಕ್ರಮಗಳಿರುತ್ತವೆ. ಆಯುರ್ವೇದಾಧಾರಿತ ಆರೋಗ್ಯಕರ ಖಾದ್ಯಗಳ ಆಹಾರ ಹಬ್ಬ, ಸ್ವದೇಶಿ ಸಾವಯವ ಸಂತೆ, ಸಾಂಸ್ಕೃತಿಕ ಹಬ್ಬಗಳೂ ಇರಲಿವೆ ಎಂದು ಅವರು ವಿವರಿಸಿದರು.
ಎರಡು ದಿನಗಳ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ‘ಆಯುಷ್ ರತ್ನ’, ಮೂಡಬಿದರೆಯ ಡಾ.ಮೋಹನ ಆಳ್ವ ಅವರಿಗೆ ‘ ಆಯುಷ್ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಲ್ಲದೇ ಆಯುಷ್ ಕ್ಷೇತ್ರದ ಸಾಧಕರಿಗೆ ಆಯುಷ್ ಭೂಷಣ, ಆಯುಷ್‌ಶ್ರೀ, ಆಯುಷ್ ಯುವಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸ ಲಾಗುವುದು ಎಂದೂ ಡಾ.ಆಶಾಜ್ಯೋತಿ ರೈ ತಿಳಿಸಿದರು.
ಕಾರ್ಯಕ್ರಮಗಳಲ್ಲಿ ವಿಧಾನಸಭೆಯ ಸಭಾಪತಿಗಳಾದ ಯು.ಟಿ.ಖಾದರ್ ಫರೀದ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ಸರಕಾರದ ಮಾಜಿ ಆಯುಷ್ ಸಚಿವ ಶ್ರೀಪಾದ್ ಯಸ್ಸೋನಾಯ್ಕ್ ಮುಂತಾದವರು ಉಪಸ್ಥಿತರಿರುವರು.
ಕೊಂಡವೂರಿನ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಮಂಗಳೂರು ಧರ್ಮಪ್ರಾಂತದ ಬಿಷಪ್ ಅ.ವಂ.ಡಾ.ಪೀಟರ್ ಪೌಲ್ ಸಲ್ಡಾನಾ, ದ.ಕ.ದ ಎಸ್.ವೈ.ಎಸ್.ನ ಅಧ್ಯಕ್ಷ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಅಲ್ಲದೇ ಜನಪ್ರತಿನಿಧಿಗಳಾದ ಕ್ಯಾ.ಬೃಜೇಶ್ ಚೌಟ, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಡಾ.ಎಚ್.ಎಸ್.ಬಲ್ಲಾಳ್, ಡಾ.ಎಚ್.ಆರ್.ನಾಗೇಂದ್ರ ಹಾಗೂ ಡಾ.ಮೊಹಮ್ಮದ್ ಇಕ್ಬಾಲ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ, ಉಡುಪಿ ಜಿಲ್ಲಾ ಕಾರ್ಯದರ್ಶಿ ಡಾ.ಸಂದೀಪ್ ಸನಿಲ್, ಎಸ್‌ಡಿಎಂ ಕಾಲೇಜಿನ ಡಾ.ಸುಚೇತ, ಡಾ.ಶ್ರೀನಿಧಿ ಬಲ್ಲಾಳ್ ಉಪಸ್ಥಿತರಿದ್ದರು.







