ಆ.7, 8ರಂದು ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಉದ್ಯೋಗ ಮೇಳ

ಕುಂದಾಪುರ, ಜು. 27: ಗ್ರಾಮೀಣ ಮತ್ತು ಹಿಂದುಳಿದ ಭಾಗಗಳ ಅರ್ಹ ಯುವ ಸಮೂಹಕ್ಕೆ ಗುಣಮಟ್ಟದ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದೊಂದಿಗೆ ಕಳೆದ 16 ವರ್ಷಗಳಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿ ಯಿಂದ ನಡೆಯುತ್ತಿರುವ ಆಳ್ವಾಸ್ ಪ್ರಗತಿ 2026 ಬೃಹತ್ ಉದ್ಯೋಗ ಮೇಳವು ಇದೇ ಆ.7 ಹಾಗೂ 8ರಂದು ಮೂಡಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಈ ಮಾಹಿತಿ ನೀಡಿ, 2007ರಲ್ಲಿ ಆರಂಭಗೊಂಡ ಈ ಆಳ್ವಾಸ್ ಪ್ರಗತಿಯು ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ಉದ್ಯಮ ಸಂಸ್ಥೆ ಗಳು ಮತ್ತು ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ರಾಜ್ಯದ ಅತ್ಯಂತ ವಿಶ್ವಾಸಾರ್ಹ ಉದ್ಯೋಗ ಮೇಳಗಳಲ್ಲಿ ಒಂದಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಮಾಜಿಕ ಹೊಣೆಗಾರಿಕೆ ಉಪಕ್ರಮದ ಭಾಗವಾಗಿ ಈ ಬೃಹತ್ ಉದ್ಯೋಗ ಮೇಳ ವನ್ನು ಸಂಪೂರ್ಣ ಉಚಿತವಾಗಿ ಆಯೋಜಿಸುತ್ತಿದೆ. ಕಳೆದ ಬಾರಿ 2,873 ಮಂದಿಗೆ ಸ್ಥಳದಲ್ಲೇ ಉದ್ಯೋಗದ ಅವಕಾಶ ಸಿಕ್ಕಿತ್ತು. ಈವರೆಗೆ ಕಳೆದ 15 ವರ್ಷಗಳಲ್ಲಿ 1 ಲಕ್ಷಕ್ಕೂ ಮಿಕ್ಕಿ ಮಂದಿ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದು, ಆ ಪೈಕಿ 40,484 ಮಂದಿ ಸ್ಥಳದಲ್ಲೇ ಉದ್ಯೋಗಾವಕಾಶ ಪಡೆದಿದ್ದರು ಎಂದವರು ತಿಳಿಸಿದರು.
ಆನ್‌ಲೈನ್ ನೋಂದಣಿ ಮಾತ್ರ: ಈ ಬಾರಿಯ ಉದ್ಯೋಗಮೇಳದಲ್ಲಿ ಐಟಿ/ ಐಟಿಇಎಸ್, ಉತ್ಪಾದನಾ ವಲಯ, ಆರೋಗ್ಯ ಮತ್ತು ಔಷಧ, ಬ್ಯಾಂಕಿಂಗ್ ಮತ್ತು ಹಣಕಾಸು, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ, ಮಾಧ್ಯಮ, ಎಲೆಕ್ಟ್ರಾನಿಕ್ಸ್, ದೂರಸಂಪರ್ಕ ಹಾಗೂ ನಿರ್ಮಾಣ ಕ್ಷೇತ್ರಗಳ ಪ್ರಮುಖ ಕಂಪೆನಿಗಳು ಭಾಗವಹಿಸುತ್ತಿವೆ. ಆಳ್ವಾಸ್ ಪ್ರಗತಿಯ ಸಂಪೂರ್ಣ ಮಾಹಿತಿಯನ್ನು -hಣಣಠಿs://ತಿತಿತಿ.ಚಿಟvಚಿsಠಿಡಿಚಿgಚಿಣi.ಛಿom- ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಉದ್ಯೋಗಾಕಾಂಕ್ಷಿಗಳು ನಿಯಮಿತವಾಗಿ ವೆಬ್‌ಸೈಟ್‌ನ್ನು ಪರಿಶೀಲಿಸಿ, ಮಾಹಿತಿ ಪಡೆಯಬಹುದು. ಸಂಪೂರ್ಣ ಉಚಿತವಾಗಿರುವ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆನ್ಲೈನ್ ನೋಂದಣಿ ಕಡ್ಡಾಯವಾಗಿದೆ ಎಂದರು.
ಉದ್ಯೋಗ ಮೇಳಕ್ಕೆ ಆಗಮಿಸುವ ಬೇರೆ ಜಿಲ್ಲೆಗಳ ಮಕ್ಕಳಿಗೆ ಮುಂಚಿನ ದಿನ ವಾಸ್ತವ್ಯದ ವ್ಯವಸ್ಥೆಯೂ ಇದೆ. ಕೆಲವೆಡೆಗಳಿಂದ ಬಸ್ಸಿನ ಸೌಲಭ್ಯವೂ ಇರುತ್ತದೆ ಎಂದವರು ತಿಳಿಸಿದರು.
ನೂರಾರು ಕಂಪೆನಿಗಳು ಭಾಗಿ: ಡಿಪ್ಲೊಮಾ ಮತ್ತು ಐಟಿಐ ಅಭ್ಯರ್ಥಿಗಳಿಗೆ ಗಲ್ಫ್ ದೇಶಗಳಲ್ಲಿ ಉದ್ಯೋಗಾವಕಾಶ ಗಳಿವೆ. ಎಂಬಿಎ, ಎಂಎಚ್‌ಆರ್‌ಡಿ, ಎಂಎಸ್‌ಡಬ್ಲ್ಯು ಮತ್ತು ಬಿಎಸ್‌ಡಬ್ಲ್ಯು ಅಭ್ಯರ್ಥಿಗಳಿಗೆ 70ಕ್ಕೂ ಹೆಚ್ಚು ಮಾನವ ಸಂಪನ್ಮೂಲ ಹುದ್ದೆಗಳು, ಉತ್ಪಾದನಾ ಕ್ಷೇತ್ರದಲ್ಲಿ 63 ಕಂಪೆನಿಗಳು, ಬಿಇ/ಬಿಟೆಕ್ (ಮೆಕ್ಯಾನಿಕಲ್), ಐಟಿಐ, ಡಿಪ್ಲೊಮಾ ಹಾಗೂ ಇತರೆ ಪದವೀಧರರಿಗೆ ಉದ್ಯೋಗಾವಕಾಶ, ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ಕೋಲಾರ) ಮಹಿಳಾ ಅಭ್ಯರ್ಥಿಗಳಿಗಾಗಿ ವಿಶೇಷ ನೇಮಕಾತಿ ಅಭಿಯಾನ ಸಹ ಇದೆ ಎಂದರು.
ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವಾ ಕ್ಷೇತ್ರದಲ್ಲಿ 35 ಸಂಸ್ಥೆಗಳ ಮೂಲಕ 150ಕ್ಕೂ ಹೆಚ್ಚು ಕೋರ್ ಮಾಹಿತಿ ತಂತ್ರಜ್ಞಾನ ಹುದ್ದೆಗಳು ಹಾಗೂ 3,500 ಕ್ಕೂ ಹೆಚ್ಚು ನಾನ್-ಐಟಿ ಹುದ್ದೆ, ಬ್ಯಾಂಕ್ ಸೇರಿದಂತೆ 23ಕ್ಕೂ ಹೆಚ್ಚು ಸಂಸ್ಥೆಗಳು ವಾಣಿಜ್ಯ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿ ಗಾಗಿ ಬ್ಯಾಂಕಿಂಗ್, ಹಣಕಾಸು ಮತ್ತು ವಿಮಾ ಕ್ಷೇತ್ರದಲ್ಲಿ ಉದ್ಯೋಗವನ್ನು ನೀಡಲಿವೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಪ್ರಗತಿಯ ಸಂಯೋಜಕ ಡಾ. ಕುಮಾರಸ್ವಾಮಿ, ನುಡಿಸಿರಿ ವಿರಾಸತ್ ಘಟಕದ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು.
320ಕ್ಕೂ ಕಂಪೆನಿಗಳು ಮೇಳದಲ್ಲಿ ಭಾಗಿ
ಈ ಬಾರಿಯ ಉದ್ಯೋಗ ಮೇಳದಲ್ಲಿ ಈಗಾಗಲೇ 320 ಕಂಪೆನಿಗಳು ನೋಂದಾಯಿಸಿಕೊಂಡಿದ್ದು, 350ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಒಟ್ಟು 23,972ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಈ ಪೈಕಿ 5,228 ಎಸೆಸೆಲ್ಸಿ ಹಾಗೂ ಪಿಯುಸಿ, 8,748 ಡಿಪ್ಲೋಮಾ, ಐಟಿಐ, 3,473 ಯಾವುದೇ ಪದವೀಧರರಿಗೆ, 1,601 ಬಿಇ/ ಬಿಟೆಕ್‌ಗೆ, 180 ಕೋರ್ ಐಟಿ, 1,843 ಎಂಬಿಎ, ಸ್ನಾತಕೋತ್ತರ, 2,149 ಹುದ್ದೆಗಳು ಬಿಕಾಂ, ಬಿಬಿಎ ಪದವೀಧರರಿಗೆ ಲಭ್ಯವಿದೆ ಎಂದು ಪ್ರಸಾದ್ ಶೆಟ್ಟಿ ತಿಳಿಸಿದರು.






