Udupi | ಜೂನ್ 12 ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ

ಉಡುಪಿ, ಜೂ.10: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂನ್ 12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ವಿಜಯ್ ಅವರು ಮಧ್ಯಾಹ್ನ 12:30ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ತೆರಳಲಿದ್ದಾರೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ದೇವರ ದರ್ಶನ ನೆರವೇರಿಸಿದ ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮತ್ತೆ ರಸ್ತೆ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ, ವಿಶೇಷ ವಿಮಾನದ ಮೂಲಕ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.
ವಿಜಯ್ ಅವರಿಗೆ ‘Z+’ ವರ್ಗದ ಭದ್ರತೆ ಕಲ್ಪಿಸಲಾಗಿರುವ ಹಿನ್ನೆಲೆಯಲ್ಲಿ ಅವರ ಭೇಟಿ ಸಂದರ್ಭದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ತಮಿಳುನಾಡು ಸಿಐಡಿ ಭದ್ರತಾ ವಿಭಾಗವು ಕರ್ನಾಟಕ ಪೊಲೀಸರಿಗೆ ಮನವಿ ಮಾಡಿದೆ. ಕರ್ನಾಟಕದಲ್ಲಿಯೂ ವಿಜಯ್ ಅವರಿಗೆ ಸಾಕಷ್ಟು ಅಭಿಮಾನಿ ಬಳಗವಿರುವುದರಿಂದ, ಅವರು ಸಂಚರಿಸುವ ಮಾರ್ಗದ ಪ್ರಮುಖ ಜಂಕ್ಷನ್‌ಗಳಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಭದ್ರತಾ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಇದಲ್ಲದೆ, ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಕೊನೆಯ 30ರಿಂದ 40 ಕಿಲೋಮೀಟರ್ ರಸ್ತೆ ಮಾರ್ಗವು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ, ಸೌಪರ್ಣಿಕಾ ನದಿ ಪಾತ್ರ ಹಾಗೂ ದಟ್ಟ ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುವುದರಿಂದ, ಸಂಶಯಾಸ್ಪದ ಚಟುವಟಿಕೆಗಳು ಮತ್ತು ಕಾಡುಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆಯೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನೂ ನಿಯೋಜಿಸಲು ಸೂಚನೆ ನೀಡಲಾಗಿದೆ.






