ಕಲ್ಮಾಡಿ ಚರ್ಚ್: ವಾರ್ಷಿಕದ ನವದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ

ಮಲ್ಪೆ, ಆ.6: ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ ಬುಧವಾರ ಸಂಜೆ ಚಾಲನೆ ನೀಡಲಾಯಿತು.
ಮಾತೆ ಮರಿಯ, ಭರವಸೆಯ ರಾಣಿ ಮಹೋತ್ಸವದ ವಿಷಯವಾಗಿದ್ದು ಹಬ್ಬಕ್ಕೆ ಪೂರ್ವ ಸಿದ್ದತೆಯಾಗಿ 9 ದಿನಗಳ ನವೇನಾ ಪ್ರಾರ್ಥನೆಗೆ ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದ ರೆಕ್ಟರ್ ವಂ. ಆಲ್ಬನ್ ಡಿಸೋಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.
9ದಿನಗಳ ನವೇನಾ ಪ್ರಾರ್ಥನೆಯಲ್ಲಿ ಭಕ್ತಾದಿಗಳಿಗಾಗಿ, ದಂಪತಿಗಳಿಗಾಗಿ, ದಾನಿಗಳಿಗಾಗಿ, ಯುವಜನರಿಗಾಗಿ, ಯಾಜಕರು ಮತ್ತು ಧಾರ್ಮಿಕರಿಗಾಗಿ, ವಯೋವೃದ್ಧರಿಗಾಗಿ, ರೋಗಿಗಳಿಗಾಗಿ, ಕುಟುಂಬಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ.
ಆ.10ರಂದು ರವಿವಾರ ಅಪರಾಹ್ನ 3:00 ಗಂಟೆಗೆ ವೆಲಂಕಣಿ ಮಾತೆಯ ಸ್ವರೂಪದ ಮೆರವಣಿಗೆಗೆ ಕಲ್ಮಾಡಿ ಸೇತುವೆಯ ಬಳಿ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿ. ಫರ್ಡಿನಾಂಡ್ ಗೊನ್ಸಾಲ್ವಿಸ್ ಚಾಲನೆ ನೀಡಲಿದ್ದಾರೆ.
ಆ.15ರಂದು ಮಹೋತ್ಸವ ಬಲಿಪೂಜೆ ಬೆಳಿಗ್ಗೆ 10:30ಕ್ಕೆ ನಡೆಯಲಿದ್ದು ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ.
ಇಂದಿನ ಕಾರ್ಯಕ್ರಮದ ವೇಳೆ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ರೆಕ್ಟರ್ ವಂ.ಡಾ.ಬ್ಯಾಪ್ಟಿಸ್ಟ್ ಮಿನೇಜಸ್, ಚರ್ಚಿನ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.







