ಕನಕದಾಸರ ಕೀರ್ತನೆಗಳು ಜಗತ್ತಿಗೆ ದಾರಿದೀಪ: ಸಂಸದ ಕೋಟ

ಉಡುಪಿ: ಭಕ್ತಿ ಪರಂಪರೆಯ ದಾಸ ಸಾಹಿತ್ಯಗಳಲ್ಲಿಯೂ ಕನಕದಾಸರು ಮುಂಚೂಣಿಯಲ್ಲಿದ್ದು, ಜಾತಿ ಮತ ಕುಲಗಳ ಬೇಧವನ್ನು ತೊಡೆದುಹಾಕಲು ಸಾಹಿತ್ಯ ರಚಿಸಿದರು. ಅಸ್ಪೃಶ್ಯತೆಯ ರೋಗಗ್ರಸ್ತ ಸಮಾಜಕ್ಕೆ ಸಂಕೀರ್ತನೆಗಳ ಮೂಲಕ ಚಿಕಿತ್ಸೆ ನೀಡಿದ ಕನಕದಾಸರನ್ನು ಜಗತ್ತು ಗಂಭೀರವಾಗಿ ಪರಿಗಣಿಸುತ್ತದೆ. ಸಾಮಾಜಿಕ ಸಾಮರಸ್ಯಕ್ಕೆ ಮಹತ್ವ ನೀಡಿದ ಕನಕದಾಸರ ಕೀರ್ತನೆಗಳು ಜಗತ್ತಿಗೆ ದಾರಿದೀಪ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ ಹಾಗೂ ಹಾಲುಮತ ಮಹಾಸಭಾ ಉಡುಪಿ ಜಿಲ್ಲೆ ಸಹಯೋಗದೊಂದಿಗೆ ಅಜ್ಜರಕಾಡಿನ ಭುಜಂಗ ಪಾರ್ಕಿನಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಅಂದಿನ ಕಾಲದಲ್ಲಿ ಸಮಾಜದಲ್ಲಿದ್ದ, ಮೇಲು-ಕೀಳು ಭಾವ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಗಳನ್ನು ತಮ್ಮ ಸಾತ್ವಿಕ ಸಂಕೀರ್ತನೆಗಳ ಮೂಲಕ ತೊಡೆದು ಹಾಕಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಏಕೈಕ ದಾಸವರೇಣ್ಯರು ಕನಕದಾಸರು ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ತಮ್ಮ ಭಕ್ತಿ ಸಂಕೀರ್ತನೆಗಳ ಮೂಲಕ ಜಗದ್ವಿಖ್ಯಾತರಾದ ಕನಕದಾಸರ ಬದುಕು ನಮಗೆಲ್ಲರಿಗೂ ಆದರ್ಶ. ಭಕ್ತಿಯ ಪರಾಕಾಷ್ಠೆಯ ಮೂರ್ತ ಸ್ವರೂಪರಾದ ಕನಕದಾಸರು ತಮ್ಮ ಸಂಕೀರ್ತನೆಗಳ ಮೂಲಕ ಪೊಡವಿಗೊಡೆಯ ಶ್ರೀಕೃಷ್ಣನನ್ನೇ ತಿರುಗುವಂತೆ ಮಾಡಿ ಇಡೀ ಜಗತ್ತಿಗೆ ಭಕ್ತಿ ಮಾರ್ಗದ ಶಕ್ತಿಯನ್ನು ತೋರಿಸಿಕೊಟ್ಟವರು. ದಾಸರಲ್ಲೇ ಶ್ರೇಷ್ಠರೆನಿಸಿಕೊಂಡ ಕನಕದಾಸರ ಬದುಕು ನಮಗೆಲ್ಲರಿಗೂ ಪ್ರೇರಣೆ ಎಂದರು.
ಕನಕದಾಸರಿಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ. ಕೃಷ್ಣನ ಮೇಲಿದ್ದ ಅನನ್ಯ ಭಕ್ತಿಯಿಂದ ದಾಸ ಸಾಹಿತ್ಯವನ್ನು ರಚಿಸಿ ಹಾಡಿದ ಅವರ ಭಕ್ತಿಗೆ ಮೆಚ್ಚಿ ಕೃಷ್ಣನೇ ತಿರುಗಿ ನಿಂತದ್ದು ಇತಿಹಾಸ. ಜಗತ್ತಿನೆಲ್ಲೆಡೆಯಿಂದ ಶ್ರೀಕೃಷ್ಣನ ದರ್ಶನಕ್ಕೆ ಬರುವ ಭಕ್ತರು ಮೊದಲು ಕನಕನ ಕಿಂಡಿಯಿಂದಲೇ ದೇವರ ದರ್ಶನ ಪಡೆಯುವುದು ಕನಕದಾಸರ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿ ಎಂದರು.
ಭಕ್ತಿ ಸಂಕೀರ್ತನೆಗಳ ಮೂಲಕ ಸಮಾಜದ ಕಟ್ಟುವ ಕನಕದಾಸರ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಅವರ ಕೀರ್ತನೆಗಳ ಬಗ್ಗೆ ಅರಿಯುವ ಹಾಗೂ ಅವರಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದುವ ಮೂಲಕ ಯುವ ಜನತೆ ಕನಕದಾಸರ ಬಗ್ಗೆ ತಿಳಿದುಕೊಂಡು ಅವರ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಅವರು ಹೇಳಿದರು.
ಸಂತ ಕವಿ ಕನಕದಾಸ ಅಧ್ಯಯನ ಕೇಂದ್ರದ ಸದಸ್ಯೆ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ವಿಶೇಷ ಉಪನ್ಯಾಸ ನೀಡಿದರು. ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ಕನಕದಾಸ ಸಮಾಜ ಸಂಘ ಜಿಲ್ಲಾ ಅಧ್ಯಕ್ಷ ಹನುಮಂತ ಡೊಳ್ಳಿನ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ತೇಜಸ್ ಕೋಟ್ಯಾನ್ ನಿರೂಪಿಸಿ, ಚಿಕ್ಕಮಠ ವಂದಿಸಿದರು. ವಿವಿಧ ಜಾನಪದ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.







