ಕನ್ನಡ ಸಾಹಿತಿ, ವಿಜ್ಞಾನಿ ಡಾ.ವ್ಯಾಸರಾವ್ ನಿಂಜೂರು ನಿಧನ

ಉಡುಪಿ, ನ.3: ಕನ್ನಡದ ಹಿರಿಯ ಸಾಹಿತಿ, ಸಣ್ಣ ಕತೆಗಾರ, ವಿಜ್ಞಾನಿ ಉಡುಪಿ ಮೂಲದ ಡಾ.ವ್ಯಾಸರಾವ್ ನಿಂಜೂರು (86) ಅವರು ಇಂದು ಮುಂಜಾನೆ ಮುಂಬಯಿ ಚೆಂಬೂರಿನ ಡಿಯೋನಾರ್ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಉಡುಪಿಯ ಮಲ್ಪೆ ಸಮೀಪದ ತೆಂಕನಿಡಿಯೂರಿನಲ್ಲಿ 1940ರ ಅ.6ರಂದು ಶ್ರೀನಿವಾಸ ನಿಂಜೂರು ಮತ್ತು ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದ ವ್ಯಾಸರಾವ್ ನಿಂಜೂರು ಗರಡಿಮಜಲು, ಕೊಡವೂರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣ ಪಡೆದು ಉಡುಪಿ ಎಂಜಿಎಂ ಕಾಲೇಜಿನಿಂದ ಬಿಎಸ್ಸಿ ಪದವಿ, ಮೈಸೂರು ವಿವಿಯಿಂದ ಎಂಎಸ್ಸಿ ಹಾಗೂ ಮುಂಬಯಿ ಮತ್ತು ಕ್ಯಾಲಿಫೋರ್ನಿಯಾ ವಿವಿಯಿಂದ ಡಾಕ್ಟರೇಟ್ ಪದವಿ ಗಳಿಸಿದರು.
ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ ಬಯೋಕೆಮೆಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕನಾಗಿ ವೃತ್ತಿ ಪ್ರಾರಂಭಿಸಿದ ಅವರು 1965ರಲ್ಲಿ ಮುಂಬಯಿಯ ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್‌ನಲ್ಲಿ ಬಯೋ ಕೆಮೆಸ್ಟ್ರಿ ಮತ್ತು ಆಹಾ ತಂತ್ರಜ್ಞಾನ ವಿಭಾಗದಲ್ಲಿ ವಿಜ್ಞಾನಿಯಾಗಿ ಸೇರಿ 1996ರಲ್ಲಿ ಸ್ವಯಂ ನಿವೃತ್ತಿ ಹೊಂದುವವರೆಗೆ ಸೇವೆ ಸಲ್ಲಿಸಿದ್ದರು. ಈ ಸಮಯ ಅವರ 82 ವೈಜ್ಞಾನಿಕ ಸಂಶೋಧನಾ ಪ್ರಬಂಧಗಳು ವಿಶ್ವದ ಪ್ರತಿಷ್ಠಿತ ವೈಜ್ಞಾನಿಕ ಮ್ಯಾಗಝೀನ್‌ಗಳಲ್ಲಿ ಪ್ರಕಟಗೊಂಡಿದ್ದವು.
ಕೇವಲ ವಿಜ್ಞಾನಿಯಾಗಿ ಮಾತ್ರವಲ್ಲದೇ ಅವರು ಕನ್ನಡದಲ್ಲಿ ಸಾಹಿತಿ, ಸಣ್ಣ ಕತೆಗಾರ, ನಾಟಕಕಾರ, ಕವಿಯಾಗಿಯೂ ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡಿ ದ್ದರು. ಅವರ ಪ್ರಸಿದ್ಧ ಕಾದಂಬರಿಗಳಲ್ಲಿ ‘ತೆಂಕನಿಡಿಯೂರಿನ ಕುಳುವಾರಿಗಳು’, ‘ಚಾಮುಂಡೇಶ್ವರಿ ಭವನ, ‘ಉಸಿರು’ ಪ್ರಮುಖವಾದವು. ಅವರು ಕುಂಕುಮ, ಮಂಟ, ದೂಜಮಾಸ್ತರರ ಮಗಳು ಬಸಿರಾದುದು ಮುಂತಾದ ಕಥಾಸಂಕಲನಗಳು ಪ್ರಕಟಗೊಂಡಿವೆ. ನಲ್ವತ್ತರ ನಲುಗು ಯಶಸ್ವಿ ನಾಟಕ ಕೃತಿಯಾ ದರೆ, ಮಕ್ಕಳಿಗಾಗಿ ಹೋಮಿಭಾಭಾ ಕೃತಿ ಬರೆದಿದ್ದಾರೆ.
ಡಾ.ವ್ಯಾಸರಾವ್ ನಿಂಜೂರು ಅವರ ಅನೇಕ ಕಥೆ, ಕವನಗಳು ನಾಡಿನ ನಾನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇದರೊಂದಿಗೆ ಅವರ ಸಮಗ್ರ ಕತೆಗಳು ಹಾಗೂ ಆತ್ಮಕಥನ ‘ಎಳೆದ ತೇರು’ ಸಹ ಪ್ರಕಟಗೊಂಡಿವೆ. ಡಾ.ನಿಂಜೂರು ಅವರ ಉಸಿರು ಕಾದಂಬರಿಗೆ ತ್ರಿವೇಣಿ ಸ್ಮಾರಕ ಪ್ರಶಸ್ತಿ, ಚಾಮುಂಡೇಶ್ವರಿ ಭವನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಪಡೆದಿದೆ. ಮೂಡಬಿದರೆ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕಶ್ರೀ ಪ್ರಶಸ್ತಿ’, ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್ ಹಾಗೂ ಮಹಾರಾಷ್ಟ್ರದ ಶ್ರೇಷ್ಠ ಕನ್ನಡಿಗ ಪ್ರಶಸ್ತಿಗಳನ್ನೂ ಅವರು ಪಡೆದಿದ್ದಾರೆ.
ಕನ್ನಡದ ತಮ್ಮ ಸಮಕಾಲೀನ ಸಾಹಿತಿಗಳಾದ ಡಾ.ಕಾರಂತ, ವ್ಯಾಸರಾಯ ಬಲ್ಲಾಳ, ಬಿ.ಎ.ಸನದಿ, ಸದಾನಂದ ಸುವರ್ಣ, ಗೌರೀಶ ಕಾಯ್ಕಿಣಿ, ಕು.ಶಿ.ಹರಿದಾಸ ಭಟ್ ಮುಂತಾದವರ ಆಪ್ತರಾಗಿದ್ದ ಡಾ.ವ್ಯಾಸರಾವ್ ನಿಂಜೂರು ಅವರು ಪುತ್ರ, ಪುತ್ರಿ ಹಾಗೂ ಅಪಾರ ಬಂಧುಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ನಾಡಿನ ಪ್ರಮುಖ ಸಾಹಿತಿಗಳು, ಗಣ್ಯರು ಡಾ.ನಿಂಜೂರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.






