ಕಾಪು ಕಾಂಗ್ರೆಸ್‍ನಿಂದ ಸೌಹಾರ್ದ ಕ್ರಿಸ್ಮಸ್ ಆಚರಣೆ

ಕಾಪು: ಯೇಸುಕ್ರಿಸ್ತ, ಮಹಮ್ಮದ್ ಪೈಗಂಬರ್, ನಾರಾಯಣ ಗುರುಗಳು ಮಾನವ ಕುಲಕ್ಕೆ ನೀಡಿರುವ ಸಂದೇಶ ಶಾಂತಿ, ಸಾಮರಸ್ಯ, ಪ್ರೀತಿಯಿಂದ ಕೂಡಿದ ಸಹಬಾಳ್ವೆ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಹಯೋಗದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಸೌಹಾರ್ದ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೀತಿ, ಸಹಬಾಳ್ವೆ ಮತ್ತು ಶಾಂತಿಯ ಬೆಳಕನ್ನು ವಿಶ್ವಕ್ಕೆ ಪಸರಿಸಿದ ಯೇಸುಕ್ರಿಸ್ತನ ಜೀವನವು ಸಾರ್ವಕಾಲಿಕ ಆದರ್ಶಪ್ರಾಯವಾಗಿದೆ. ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ಮತ್ತು ಜಾತಿ, ಧರ್ಮಗಳ ನಡುವೆ ನಡೆಯುತ್ತಿರುವ ಅಹಿತಕರ ವಿದ್ಯಮಾನಗಳನ್ನು ಅವಲೋಕಿಸಿದಾಗ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಅಪಾಯದಲ್ಲಿದೆ ಎಂದನಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ಪರಮ ಗ್ರಂಥವಾಗಿ ಗೌರವಿಸಿ, ಸ್ವೀಕರಿಸಿ, ಪಾಲಿಸುತ್ತಾ ಬಂದಿರುವ ಏಕೈಕ ರಾಜಕೀಯ ಪಕ್ಷವಾಗಿದ್ದು, ಸದಾ ಶಾಂತಿ, ಸಾಮರಸ್ಯ, ಸಹಬಾಳ್ವೆ ಮತ್ತು ಜಾತ್ಯಾತೀತತೆಯನ್ನು ಮೂಲಮಂತ್ರವಾಗಿ ಅಳವಡಿಸಿಕೊಂಡು ದೇಶದ ಮತ್ತು ಜನತೆಯ ಏಳಿಗೆಗಾಗಿ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದೆ ಎಂದರು.
ಇದೇ ವೇಳೇ ಮಾಜಿ ಪ್ರಧಾನಿ ದಿ. ಡಾ. ಮನಮೋಹನ್ ಸಿಂಗ್ ಅವರ ಪುಣ್ಯತಿಥಿಯ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸುದ್ದಿ ಮಾಧ್ಯಮದ ನಿರೂಪಕ ಆಲ್ವಿನ್ ದಾಂತಿ ಮಾತನಾಡಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಂ. ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಕಾಪು ದಿವಾಕರ್ ಶೆಟ್ಟಿ ಮಾತನಾಡಿ ಶುಭಾಶಯ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೈ. ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಂತಲತಾ ಎಸ್. ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಪಕ್ಷದ ಪ್ರಮುಖರಾದ ನವೀನ್‍ಚಂದ್ರ ಸುವರ್ಣ, ಗೋಪಾಲ್ ಪೂಜಾರಿ ಪಲಿಮಾರು, ಪ್ರಶಾಂತ್ ಜತ್ತನ್ನ, ಶರ್ಫುದ್ದೀನ್ ಶೇಖ್, ಹಸನಬ್ಬ ಶೇಖ್, ನಿಯಾಝ್ ಪಡುಬಿದ್ರಿ ಉಪಸ್ಥಿತರಿದ್ದರು. ಅಶ್ವಿನಿ ಬಂಗೇರ ಸ್ವಾಗತಿಸಿದರು. ತಸ್ನಿನ್ ಆರಾ ವಂದಿಸಿದರು.







