ಕಾಪು | ಬೀಚ್ ಪ್ರವಾಸಿಗರಿಗೆ ಗಾಂಜಾ ಮಾರಾಟ ಆರೋಪ: ಇಬ್ಬರ ಬಂಧನ

ಕಾಪು, ಅ.28: ಕಾಪು ಹಾಗೂ ಮಟ್ಟು ಬೀಚ್ಗಳಿಗೆ ಆಗಮಿಸುವ ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಅ.27ರಂದು ಬಂಧಿಸಿದ್ದಾರೆ.
ಬಂಧಿತರನ್ನು ಬೆಳಪು ಗ್ರಾಮದ ವಿನಯನಗರದ ನಿವಾಸಿ ಆರೀಫ್(38) ಹಾಗೂ ಪಡುತೋನ್ಸೆ ಗ್ರಾಮದ ಹೂಡೆಯ ಕೆಮ್ಮಣ್ಣು ನಿವಾಸಿ ಅಕೀಫ್(34) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದರು. ಇವರಿಂದ ಸುಮಾರು 2.85 ಲಕ್ಷ ರೂ. ಮೌಲ್ಯದ 5.710 ಕೆ.ಜಿ. ಗಾಂಜಾ, 225ರೂ. ನಗದು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಆಂಧ್ರಪ್ರದೇಶದ ಹೈದರಾಬಾದ್ನಿಂದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆರೋಪಿಗಳ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ಉಪವಿಭಾಗದ ಎಎಸ್ಪಿ ಈಶಿತಾ ಗುಪ್ತಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಮಾರ್ಗದರ್ಶನದಲ್ಲಿ ಕಾಪು ಪೊಲೀಸ್ ಠಾಣೆಯ ಪಿಎಸ್ಐ ತೇಜಸ್ವಿ ನೇತೃತ್ವದಲ್ಲಿ ಕಾಪು ಠಾಣೆಯ ಪೊಲೀಸ್ ಸಿಬ್ಬಂದಿ, ಕಾರ್ಕಳ ಉಪವಿಭಾಗದ ಆ್ಯಂಟಿ ಎನ್ಡಿಪಿಎಸ್ ಸ್ಕ್ವಾಡ್, ಸಿಡಿಆರ್ ತಾಂತ್ರಿಕ ವಿಭಾಗದ ಸಿಬ್ಬಂದಿ ಹಾಗೂ ಎಸ್ಒಸಿಒ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ






