ಡಿ.28ರಂದು ಕ್ರಿಯೇಟಿವ್ ಕಾಲೇಜಿನಲ್ಲಿ ʼಕಾರ್ಕಳ 21ನೇ ಸಾಹಿತ್ಯ ಸಮ್ಮೇಳನʼ

ಕಾರ್ಕಳ: ಕಾರ್ಕಳ ತಾಲೂಕಿನ 21ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ. 28ರಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ಸಾಹಿತಿ ಹಾಗೂ ಪತ್ರಕರ್ತ ವಾಸುದೇವ ಭಟ್ ಸಿದ್ದಾಪುರ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ತಿಳಿಸಿದರು.
ಅವರು ಕಾರ್ಕಳದ ಪತ್ರಿಕಾಭವನದಲ್ಲಿ ಸಮ್ಮೇಳನದ ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸಮ್ಮೇಳನದ ಅಂಗವಾಗಿ ಪೂರ್ವಾಹ್ನ 8 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ನೆರವೇರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣವನ್ನು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಿತಾ ಪೂಜಾರಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆಯನ್ನು ಕನ್ನಡ ಉಪನ್ಯಾಸಕ ಶಿವಕುಮಾರ್ ಹಾಗೂ ಸುನಿಲ್ ಶೆಟ್ಟಿ ವಹಿಸಲಿದ್ದು, ನಿರೂಪಣೆಯನ್ನು ನಾಗೇಶ್ ನಲ್ಲೂರು ಮಾಡಲಿದ್ದಾರೆ ಎಂದರು.
ಕಾಲೇಜು ಸಂಸ್ಥಾಪಕ ಅಶ್ವಥ್ ಎಸ್ ಎಲ್ ಮಾತನಾಡಿ ಪೂರ್ವಾಹ್ನ ಕ್ರಿಯೇಟಿವ್ ಪುಸ್ತಕ ಮನೆಯಿಂದ ಜೋಡು ರಸ್ತೆಯ ಮೂಲಕ ಸಮ್ಮೇಳನಾಧ್ಯಕ್ಷರ ಗೌರವಪೂರ್ವಕ ಸ್ವಾಗತದೊಂದಿಗೆ ಭವ್ಯ ಪುರಮೆರವಣಿಗೆ ನಡೆಯಲಿದೆ. ಕನ್ನಡ ತಾಯಿ ಭುವನೇಶ್ವರಿ ದೇವಿಯ ಶೋಭಾಯಾತ್ರೆ, ಸ್ಥಳೀಯ ಸಾಂಸ್ಕೃತಿಕ ತಂಡಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ, ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು, ಚೆಂಡೆ ಹಾಗೂ ಗೊಂಬೆ ತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ. ಮೆರವಣಿಗೆಯನ್ನು ಯಕ್ಷ ಕಲಾರಂಗ ಕಾರ್ಕಳದ ಅಧ್ಯಕ್ಷ ವಿಜಯ ಶೆಟ್ಟಿ ಉದ್ಘಾಟಿಸಲಿದ್ದಾರೆ ಎಂದರು.
ಪೂರ್ವಾಹ್ನ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಡಾ. ಮಾಲತಿ ಜಿ. ಪ್ರಭು ವಿರಚಿತ ‘ನನ್ನೊಳಗಿನ ನಾನು’ ಹಾಗೂ ಆರ್. ರಮೇಶ್ ಪ್ರಭುರವರ ‘ಮನದಾಳದ ಮುತ್ತುಗಳು’ ಕೃತಿಗಳನ್ನು ವಿಶ್ರಾಂತ ಪ್ರಾಂಶುಪಾಲ ಸಾಹಿತ್ಯ ಸಂಘ ಕಾರ್ಕಳ ಅಧ್ಯಕ್ಷ ಪ್ರೊ. ಬಿ. ಪದ್ಮನಾಭ ಗೌಡ ಬಿಡುಗಡೆಗೊಳಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾರ್ಕಳ ಬಜಗೋಳಿ ಉದ್ಯಮಿ, ರಾಜ್ಯ ಕ್ವಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷರ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಉದ್ಘಾಟಿಸಲಿದ್ದಾರೆ. ಆಶಯ ನುಡಿಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೀಡಲಿದ್ದಾರೆ. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಕೆ. ಗುಣಪಾಲ ಕಡಂಬ ಉಪಸ್ಥಿತರಿರಲಿದ್ದಾರೆ.
ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ವಿದ್ಯಾರ್ಥಿ–ಪುಸ್ತಕ ಪ್ರೀತಿ ವಿಷಯದ ಗೋಷ್ಠಿಯಲ್ಲಿ ವಿದ್ಯಾರ್ಥಿ ಗಳು ತಮ್ಮ ನೆಚ್ಚಿನ ಪುಸ್ತಕಗಳನ್ನು ಪರಿಚಯಿಸಲಿದ್ದಾರೆ. ಪುಸ್ತಕ ಲೋಕ – ಸಾಹಿತ್ಯ ವಿಸ್ಮಯ ಗೋಷ್ಠಿಯಲ್ಲಿ ಖ್ಯಾತ ಸಾಹಿತಿಗಳು ಭಾಗವಹಿಸಲಿದ್ದಾರೆ. ಗೋಷ್ಠಿಗಳ ಸಮನ್ವಯಕಾರರಾಗಿ ಮಿತ್ರಪ್ರಭ ಹೆಗ್ಡೆ ಹಾಗೂ ಮುನಿರಾಜ್ ರೆಂಜಾಳ ಕಾರ್ಯನಿರ್ವಹಿಸಲಿದ್ದಾರೆ.
ಇಳಿಹಗಲು 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ. ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ಸನ್ಮಾನ ನೆರವೇರಿಸಲಿದ್ದು, ನಿಟ್ಟೆ ಕ್ಯಾಂಪಸ್ ನಿರ್ದೇಶಕ ಯೋಗೀಶ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾರೋಪ ಭಾಷಣವನ್ನು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ ಎಸ್.ಎಲ್ ನೀಡಲಿದ್ದು, ಅಧ್ಯಕ್ಷತೆಯನ್ನು ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಹಿಸಲಿದ್ದಾರೆ. ಪ್ರತಿಸ್ಪಂದನವನ್ನು ಸಮ್ಮೇಳನಾಧ್ಯಕ್ಷ ವಾಸುದೇವ ಭಟ್ ಸಿದ್ದಾಪುರ ನೀಡಲಿದ್ದಾರೆ.
ಸಾಹಿತ್ಯ, ಶಿಕ್ಷಣ, ಉದ್ಯಮ, ಸಮಾಜ ಸೇವೆ, ಕೃಷಿ, ದೈವಾರಾಧನೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದ ಅವರು ಈ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಕಾರ್ಕಳ ಇನ್ನಿತರ ಕಡೆಗಳ ಸಾಹಿತಿಗಳು ಸಾಹಿತ್ಯಭಿಮಾನಿಗಳು, ಕವಿಗಳು, ಇತರ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವ ಸಾಹಿತಿಗಳು, ಬರಹಗಾರರು ಭಾಗವಹಿಸಿ ಈ ಬಾರಿಯ ಸಾಹಿತ್ಯ ಸಮ್ಮೇಳನ ಬಹಳ ಅದ್ದೂರಿ ಹಾಗೂ ಅರ್ಥಪೂರ್ಣವಾಗಲಿದೆ. ಈ ಕನ್ನಡದ ಹಬ್ಬದ ಯಶಸ್ವಿಗೆ ಎಲ್ಲರೂ ಕೈ ಜೋಡಿಸುವಂತೆ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಪಧಾಧಿಕಾರಿಗಳಾದ ದೇವದಾಸ್ ಕೆರೆಮನೆ , ನಿತ್ಯಾನಂದ ಪೈ, ಕ್ರಿಯೆಟಿವ್ ಕಾಲೇಜುಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ಉಪಸ್ಥಿತರಿದ್ದರು.







