ಕಾರ್ಕಳ| ಆ್ಯಸಿಡ್ ಎರಚಿ ಕೊಲೆಯತ್ನ ಪ್ರಕರಣ: ಆರೋಪಿಗೆ 10 ವರ್ಷ ಜೈಲುಶಿಕ್ಷೆ

ಕಾರ್ಕಳ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಚಾರಾ ಗ್ರಾಮದ ಮಂಡಾಡಿಜೆಡ್ಡುವಿನ ಕಾರಾಡಿ ಎಂಬಲ್ಲಿ ಆ್ಯಸಿಡ್ ಎರಚಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದ ಆರೋಪಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಂಚಾರಿ ಪೀಠ ಕಾರ್ಕಳ ನ್ಯಾಯಾಲಯ 10ವರ್ಷ ಕಠಿಣ ಶಿಕ್ಷೆ ವಿಧಿಸಿ ಎ.28ರಂದು ಆದೇಶ ನೀಡಿದೆ.
ಕೇರಳ ಮೂಲದ ರತೀಶ್ ಕೆ.ಟಿ. ಶಿಕ್ಷೆಗೆ ಗುರಿಯಾದ ಆರೋಪಿ. ಈತ ಮತ್ತು ಸುಧೀರ್ ಪಿ.ಎ. ಎಂಬವರು ಸ್ನೇಹಿತರಾಗಿದ್ದು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿ ಕೊಂಡಿದ್ದರು. ಇವರಿಬ್ಬರು 2022ರ ಫೆ.28ರಂದು ಕಾರಾಡಿಗೆ ಬಂದಿದ್ದು ಆ ಸಮಯದಲ್ಲಿ ಮದ್ಯಪಾನ ಮಾಡಿದ್ದರು.
ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವ ವಿಚಾರದಲ್ಲಿ ನಶೆಯಲಿದ್ದ ಆರೋಪಿ, ಸುಧೀರ್‌ಗೆ ಹಲ್ಲೆ ನಡೆಸಿದ್ದನು. ಆಗ ಇತರ ಸ್ನೇಹಿತರು ಜಗಳವನ್ನು ಬಿಡಿಸಿದ್ದರು. ನಂತರ 2022ರ ಮಾ.1ರಂದು ಸಂಜೆ ಸ್ನೇಹಿತರ ಹುಟ್ಟು ಹಬ್ಬವನ್ನು ಆಚರಿಸಿ, ರೂಮಿನ ಹೊರಗಡೆ ಮೆಟ್ಟಲಿನ ಬದಿಯಲ್ಲಿ, ಮಲಗಿದ್ದ ಸುಧೀರ್ ಮೇಲೆ ಆರೋಪಿ ರತೀಶ್, ಕೊಲ್ಲುವ ಉದ್ದೇಶದಿಂದ ರಬ್ಬರ್ ಟ್ಯಾಪಿಂಗ್‌ಗೆ ಬಳಸುವ ಪೊರ್ಮಿಕ್ ಆ್ಯಸೀಡ್‌ನ್ನು ಮಗ್‌ನಲ್ಲಿ ಹಾಕಿಕೊಂಡು ಮುಖಕ್ಕೆ ಹಾಗೂ ಮೈ ಮೇಲೆ ಎರೆಚಿ ಕೊಲೆ ಮಾಡಲು ಪ್ರಯತ್ನಿಸಿದ್ದನು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಠಾಣಾಧಿಕಾರಿ ನ್ಯಾಯಾಲಯ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಸಮೀವುಲ್ಲಾ ಎಪ್ರಿಲ್ ಮೊದಲ ವಾರದಲ್ಲಿ ಆರೋಪಿಯನ್ನು ದೋಷಿ ಎಂಬುದಾಗಿ ಆದೇಶಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದರು. ಇಂದು ನ್ಯಾಯಾಧೀಶರು ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ 15 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.






