ಕಾರ್ಕಳ | ಕ್ಯಾನ್ಸರ್ ಜಾಗೃತಿ : ವಿದ್ಯಾರ್ಥಿನಿಯರೊಂದಿಗೆ ಸಂವಾದ

ಕಾರ್ಕಳ: ಮಾರಕ ಕಾಯಿಲೆಯಾದ ಕ್ಯಾನ್ಸರ್ ಎರಡು, ಮೂರನೇ ಹಂತಕ್ಕೆ ತಲುಪಿದರೂ ಮನುಷ್ಯ ಧೃತಿಗೆಟ್ಟು ಆತಂಕ ಪಡಬೇಕಾಗಿಲ್ಲ. ಉತ್ತಮ ಚಿಕಿತ್ಸೆಯ ಜೊತೆ ಸಂತುಲಿತ ಆಹಾರ ಮತ್ತು ನಿಯಮಿತ ವ್ಯಾಯಾಮಗಳನ್ನು ರೂಢಿಸಿಕೊಂಡು ದೀರ್ಘ ಕಾಲ ಬದುಕಿದ ಉದಾಹರಣೆಗಳಿವೆ ಎಂದು ಮನಶ್ಯಾಸ್ತ್ರಜ್ಞೆ ಜ್ಯೇಷ್ಠಲಕ್ಷ್ಮೀ ಮಂಗಳೂರು ಹೇಳಿದ್ದಾರೆ.
ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಹಾಗೂ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್, ಕ್ಯಾನ್ಸರ್ ಮಾಹಿತಿ ಕೇಂದ್ರ ಕಾರ್ಕಳ ನೇತೃತ್ವದಲ್ಲಿ , ಟೀಮ್ ಸಿಂಧೂರ್
ಕಾರ್ಕಳ ಮತ್ತು ಕಾರ್ಕಳ ಟೈಗರ್ಸ್ ಸಹಯೋಗ ದೊಂದಿಗೆ ನಗರದ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಜೀವಕೋಶಗಳಿಗೆ ಹಾನಿಯಾಗುವುದು ಮತ್ತು ದೇಹ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುವುದು, ದಿಢೀರ್ ದೇಹ ತೂಕ ಕಳೆದುಕೊಳ್ಳುವುದು ಇತ್ಯಾದಿ ಸಾಮಾನ್ಯವಾಗಿ ಕ್ಯಾನ್ಸರ್ ಕಾಯಿಲೆಯ ಲಕ್ಷಣಗಳು. ಪೌಷ್ಟಿಕ ನಾರಿನಂಶವುಳ್ಳ ಆಹಾರದ ಕೊರತೆ ಮತ್ತು ವ್ಯಾಯಾಮರಹಿತ ಜೀವನ ಈ ಕಾಯಿಲೆಯ ಮೇಲುಗೈಗೆ ಕಾರಣ. ಜೀವನಶೈಲಿಯ ಸಂಪೂರ್ಣ ಬದಲಾವಣೆ ಮತ್ತು ಎಚ್ಚರಿಕೆಯ ಅನುಕೂಲಗಳು ಈ ಕಾಯಿಲೆ ಗೆಲ್ಲುವುದಕ್ಕೆ ಸಹಕಾರಿ . ಆದ್ದರಿಂದ ಚಿಕಿತ್ಸೆಗಿಂತ ಮೊದಲು ತಜ್ಞರ ಮಾಹಿತಿ ಮತ್ತು ತಪಾಸಣೆಗಳ ನೆರವಿನಿಂದ ಕಾಯಿಲೆ ಉಲ್ಬಣದ ಸಂಕಷ್ಟದಿಂದ ಪಾರಾಗಬಹುದು ಎಂದು ಅವರು ತಿಳಿಸಿದರು.
ಎಸ್ ವಿ ಟಿ ಮಹಿಳಾ ಕಾಲೇಜು ಪ್ರಾಂಶುಪಾಲೆ ಗೀತಾ ಜಿ., ಎನ್ನೆಸ್ಸೆಸ್ ಯೋಜನಾಧಿಕಾರಿ ಶ್ವೇತಾ, ರೆಡ್ ಕ್ರಾಸ್ ಯೋಜನಾಧಿಕಾರಿ ಸೋನಾ, ಕಾರ್ಕಳ ಟೈಗರ್ಸ್ ಸಂಸ್ಥಾಪಕ ಬೋಳ ಪ್ರಶಾಂತ್ ಕಾಮತ್ , ಟೀಮ್ ಸಿಂಧೂರದ ಚಂದ್ರಿಕಾ ರಾವ್ ಹಿರಿಯಂಗಡಿ ಉಪಸ್ಥಿತರಿದ್ದರು .
ಎಸ್ ವಿ ಟಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಸಂವಾದದಲ್ಲಿ ಭಾಗವಹಿಸಿದ್ದರು .
ಪ್ರತಿಜ್ಞಾ ಸ್ವಾಗತಿಸಿದರು. ದಿಶಾ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಾ ಕಾರ್ಯಕ್ರಮ ನಿರೂಪಿಸಿದರು. ಪೂಜಾ ವಂದಿಸಿದರು .







