Karkala | ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ: ಮೂವರಿಗೆ ಗಂಭೀರ ಗಾಯ

ಕಾರ್ಕಳ: ಏಕಾಏಕಿ ರಸ್ತೆಗೆ ಬಂದ ಸೈಕಲ್ ಸವಾರನನ್ನು ಬಚಾವ್ ಮಾಡುವ ಭರದಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮೂವರು ಗಾಯಗೊಂಡ ಘಟನೆ ಕಾರ್ಕಳ ಹಿರ್ಗಾನ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರ್ ಸದಾನಂದ ನಾಯಕ್, ಅವರ ಪತ್ನಿ ಮತ್ತು ಮಗನಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಸದಾನಂದ ನಾಯಕ್ ಅವರು ಹಿರ್ಗಾನ ಗ್ರಾಮದ ಮೂರೂರು ಬಳಿ ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿ ಮೂಲಕ ತನ್ನ ಕುಟುಂಬದೊಂದಿಗೆ ಹೆಬ್ರಿ ಚಾಂತಾರಿನ ಮನೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಬಾಲಕನೋರ್ವ ಸೈಕಲ್ ಚಲಾಯಿಸುತ್ತಾ ಏಕಾಏಕಿ ಕಾರಿಗೆ ಅಡ್ಡ ಬಂದಿದ್ದಾನೆ. ಈ ವೇಳೆ ಸೈಕಲ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.





