ಜ. 25ರಿಂದ ಕಾರ್ಕಳ ಕಾಂಗ್ರೆಸ್ ವತಿಯಿಂದ ಹೊನಲು ಬೆಳಕಿನ ಅಥ್ಲೆಟಿಕ್ ಕ್ರೀಡಾಕೂಟ

ಕಾರ್ಕಳ : ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ- ಹೆಬ್ರಿ ಮತ್ತು ಯುವ ಕಾಂಗ್ರೆಸ್ ಸಮಿತಿ ಕಾರ್ಕಳ ಆಶ್ರಯದಲ್ಲಿ ಕ್ಷೇತ್ರದ ಕ್ರೀಡಾಪಟುಗಳನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕು ವ್ಯಾಪ್ತಿಯ ಸಾರ್ವಜನಿಕರಿಗೆ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ ಅಥ್ಲೆಟಿಕ್ ಕ್ರೀಡಾಕೂಟ ಹಾಗೂ ಪಂದ್ಯಾಕೂಟ ವನ್ನು ಜನವರಿ 25, 26 ರಂದು ಸಂಜೆ 4 ಗಂಟೆಯಿಂದ ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಾಂಗ್ರೇಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು ತಿಳಿಸಿದರು.
ಅವರು ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಸಾರ್ವಜನಿಕರಿಗೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಅಥ್ಲೆಟಿಕ್ ಸ್ಪರ್ಧಾ ಕೂಟದಲ್ಲಿ ಹೈಸ್ಕೂಲ್, ಪದವಿ ಪೂರ್ವ, ಪದವಿ, 35 ವರ್ಷ, ಮುಕ್ತ ಮತ್ತು 50 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 100 ಮೀ, 200ಮೀ, 400ಮೀ, ಉದ್ದ ಜಿಗಿತ ಹಾಗೂ ಗುಂಡು ಎಸೆತ ಸ್ಪರ್ಧೆಯೊಂದಿಗೆ ನಡೆಯಲಿದ್ದು ಗುರುತು ಚೀಟಿ ಕಡ್ಡಾಯವಾಗಿದೆ. ವಿಜೇತರಿಗೆ ನಗದು, ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಗುಂಪು ಸ್ಪರ್ಧೆಯಲ್ಲಿ ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್, ಪುರುಷ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ, ಹಾಗೂ ಖೋ ಖೋ ಸ್ಪರ್ಧೆಯು ನಡೆಯಲಿದ್ದು ಜನವರಿ 18 ಒಳಗೆ ನೋಂದಾವಣಿ ಕಡ್ಡಾಯವಾಗಿದೆ. ಎಲ್ಲಾ ವಿಭಾಗದ ವಿಜೇತರಿಗೆ ಪ್ರಥಮ ರೂ15,000, ದ್ವಿತೀಯ10,000 ತೃತೀಯ 6,000, ಚತುರ್ಥ 4,000 ಹಾಗೂ ಆಕರ್ಷಕ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.
ಜನವರಿ 25ರ ಸಂಜೆ 4 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮ ಮೊದಲು ಗ್ರಾಮೀಣ ತಂಡಗಳಿಂದ ಪಥ ಸಂಚಲನ ನಡೆಯಲಿದ್ದು ಆಕರ್ಷಕ ತಂಡಕ್ಕೆ ಪ್ರಥಮ ರೂ 15,000, ದ್ವಿತೀಯ 10,000, ತೃತೀಯ 5000 ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಿ ಪುರಸ್ಕರಿಸಲಾಗುವುದು.
ಕ್ರೀಡಾಕೂಟದ ಉದ್ಘಾಟನೆಯನ್ನು ಕಾಂಗ್ರೆಸ್ ಹಿರಿಯ ಮುಖಂಡರು ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯಿಲಿಯವರು ನಡೆಸಲಿದ್ದು ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರ ಉಪ ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರುಗಳಾದ, ಸಂತೋಷ್ ಲಾಡ್, ಕೃಷ್ಣ ಬೈರೆಗೌಡ, ಶಾಸಕರಾದ ಮಂಜುನಾಥ್ ಭಂಡಾರಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ,ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ನಾರಾಯಣ ಗುರು ನಿಗಮ ಅಧ್ಯಕ್ಷಮಂಜುನಾಥ್ ಪೂಜಾರಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ ಎ, ಗಫೂರ್, ಉಡುಪಿ ಉಸ್ತುವಾರಿ ಐವನ್ ಡಿಸೋಜಾ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದು ಕ್ರೀಡಾ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದರು.
ಬ್ಲಾಕ್ ಆದ್ಯಕ್ಷರಾದ ಶುಭದರಾವ್, ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ಯುವಕಾಂಗ್ರೆಸ್ ಅಧ್ಯಕ್ಷ ಸೂರಜ್ ನಕ್ರೆ, ಮಲ್ಲಿಕ್ ಅತ್ತೂರು, ಮಾಜಿ ಪುರಸಭಾ ಅಧ್ಯಕ್ಷರಾದ ಸುಬಿತ್ ಕುಮಾರ್ , ಬ್ಲಾಕ್ ಪ್ರಧಾನ.ಕಾರ್ಯದರ್ಶಿ ವಿವೇಕ್ ಶೆಣೈ ಉಪಸ್ಥಿತರಿದ್ದರು.







