ಕಾರ್ಕಳ| ಮಗಳ ಕತ್ತು ಹಿಸುಕಿ ಕೊಲೆ ಪ್ರಕರಣ: ತಾಯಿಯ ಬಂಧನ

ಕಾರ್ಕಳ, ಅ.3: ಪ್ರೀತಿಯ ಕಾರಣಕ್ಕೆ ಮನೆ ಬಿಟ್ಟು ಹೋಗುವುದಾಗಿ ಹೇಳಿದ ಮಗಳನ್ನು ತಾಯಿ ಕೊಲೆ ಮಾಡಿದ್ದಾರೆ ಎನ್ನಲಾದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಎಂಬಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಕೊಲೆಯಾದ ಮಗಳನ್ನು ಕಾನಂಗಿಯ ಶೇಖ್ ಮುಸ್ತಫಾ ಎಂಬವರ ಮಗಳು ಶಿಫನಾಝ್ (17) ಎಂದು ಗುರುತಿಸ ಲಾಗಿದೆ. ಕೊಲೆ ಆರೋಪಿ ಮೃತಳ ತಾಯಿ ಗುಲ್ಝಾರ್ ಬಾನು (45) ಎಂಬಾಕೆಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸೆ.20ರಂದು ಪ್ರೀತಿಯ ವಿಚಾರವಾಗಿ ತಾಯಿ ಮತ್ತು ಮಗಳ ಮಧ್ಯೆ ಜಗಳ ನಡೆದಿತ್ತು. ಅದಕ್ಕೆ ಶಿಫನಾಝ್ ತಾನು ತನ್ನ ಗೆಳೆಯನೊಂದಿಗೆ ಮನೆ ಬಿಟ್ಟು ಹೋಗುವುದಾಗಿ ತಿಳಿಸಿದ್ದಳು. ಇದರಿಂದ ಸಿಟ್ಟಿಗೆದ್ದ ತಾಯಿ ಮಗಳ ಬಾಯಿಗೆ ಬಟ್ಟೆ ತುರುಕಿಸಿ, ಕುತ್ತಿಗೆ ಒತ್ತಿ ಹಿಡಿದು ಕೊಲೆ ಮಾಡಿದ್ದಾಳೆ ಎಂದು ದೂರಲಾಗಿದೆ.
ಈ ಬಗ್ಗೆ ಶಿಫನಾಝ್‌ಳ ತಂದೆ, ಮಗಳು ತಾಯಿಯ ಜೊತೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಶಿಫನಾಝ್ ಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿತು. ಅದರಂತೆ ತಾಯಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





