ಕಾರ್ಕಳ| ಭೀಕರ ರಸ್ತೆ ಅಪಘಾತ; ಮೃತರ ಸಂಖ್ಯೆ 4ಕ್ಕೆ ಏರಿಕೆ, 9 ಮಂದಿಗೆ ಗಾಯ

ಕಾರ್ಕಳ, ಜ.23: ಖಾಸಗಿ ಬಸ್ ಹಾಗೂ ತೂಫಾನ್ ವಾಹನಗಳ ಮಧ್ಯೆ ಮಿಯಾರು ಗ್ರಾಮದ ಕಂಬಳಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ 2.50ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಮಗು ಸಹಿತ 9 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ತೂಫನ್ ವಾಹನ ಚಾಲಕ ಮಣ್ಣಪ್ಪ, ಚೇತನ್(27), ರೋಹಿತ್(28) ಹಾಗೂ ಮಲ್ಲಮ್ಮ(50) ಎಂದು ಗುರುತಿಸಲಾಗಿದೆ. ಸಂಗೀತ (40), ಕವಿತಾ(38), ಬಸವರಾಜ್(56), ಕಿಶೋರ್(28), ಲಕ್ಷ್ಮೀ(25), ಜ್ಯೋತಿ(25), ಜಯಲಕ್ಷ್ಮೀ(24), ಎರಡು ವರ್ಷದ ಮಗು ಕುಶಲ್ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲ ಗುಲ್ಬರ್ಗ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ.
ತೂಫಾನ್ ವಾಹನದಲ್ಲಿ ಒಂದು ಮಗು ಸೇರಿದಂತೆ 13 ಮಂದಿ ಪ್ರಯಾಣಿಸುತ್ತಿದ್ದು ಇವರಲ್ಲಿ ತೀವ್ರವಾಗಿ ಗಾಯ ಗೊಂಡ ಐದು ಮಂದಿ ಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಮಗು ಅಪಾಯ ದಿಂದ ಪಾರಾಗಿದ್ದು, ಉಳಿದ ಗಾಯಾಳು ಗಳನ್ನು ಕಾರ್ಕಳದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇವರೆಲ್ಲ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ಗುಲ್ಬರ್ಗದಿಂದ ತೂಫಾನ್ ವಾಹನದಲ್ಲಿ ಹೊರಟಿದ್ದರು. ಉಡುಪಿಗೆ ಬಂದ ಅವರು, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ಬಳಿಕ ಧರ್ಮಸ್ಥಳಕ್ಕೆ ಹೊರಟಿದ್ದರು. ಕಾರ್ಕಳ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಇವರ ತೂಫಾನ್ ವಾಹನಕ್ಕೆ, ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಅತೀವೇಗದಿಂದ ಬರುತ್ತಿದ್ದ ಖಾಸಗಿ ಬಸ್, ತಿರುವಿನಲ್ಲಿ ರಸ್ತೆಯ ಬಲಭಾಗಕ್ಕೆ ಬಂದು ಮುಖಾಮುಖಿಯಾಗಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ತುಫಾನ್ ವಾಹನ ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದವರು ತೀವ್ರವಾಗಿ ಗಾಯಗೊಂಡರೆ ನ್ನಲಾಗಿದೆ. ಇವರ ಪೈಕಿ ಗಂಭೀರವಾಗಿ ಗಾಯಗೊಂಡ ಮೂವರು ಸ್ಥಳದಲ್ಲಿಯೇ ಮೃತಪಟ್ಟರು. ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಲ್ಲಮ್ಮ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ಪುಲ್ಕೆರಿ ಬೈಪಾಸ್‌ನಿಂದ ಮಾಳ ಘಾಟ್‌ವರೆಗೆ ಅಲ್ಲಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಅವೈಜ್ಞಾನಿಕವಾಗಿ ಕುಂಟುತ್ತಾ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ ಹಲವಾರು ಅಪಘಾತ ನಡೆಯುತ್ತಿವೆ. ಆದರೂ ಸಂಬಂಧ ಪಟ್ಟ ಇಲಾಖೆ ಎಚ್ಚೆತುಕೊಳ್ಳುತ್ತಿಲ್ಲ. ಇದರಿಂದ ಅಪಘಾತಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







