ಕಾರ್ಕಳ: ಭೀಕರ ರಸ್ತೆ ಅಪಘಾತ; ಮೃತರು ಗುಲ್ಬರ್ಗದವರು

ಕಾರ್ಕಳ, ಜ.23: ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಮಿಯಾರು ಗ್ರಾಮದ ಕಂಬಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜ.23ರಂದು ಮಧ್ಯಾಹ್ನ 2.50 ಸುಮಾರಿಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸಲಾಗಿದ್ದು, ಇವರೆಲ್ಲ ಗುಲ್ಬರ್ಗ ಜಿಲ್ಲೆಯವರು ಎಂದು ತಿಳಿದುಬಂದಿದೆ.
ಮೃತರನ್ನು ತೂಫನ್ ವಾಹನ ಚಾಲಕ ಮಣ್ಣಪ್ಪ, ಚೇತು ಹಾಗೂ ರೋಹಿತ್ ಎಂದು ಗುರುತಿಸಲಾಗಿದೆ. ಇವರೆಲ್ಲ ಗುಲ್ಬರ್ಗದವರಾಗಿದ್ದಾರೆ.
ಇವರು ಗುಲ್ಬರ್ಗದಿಂದ ತೂಫನ್ ವಾಹನದಲ್ಲಿ ಹೊರಟಿದ್ದು, ಉಡುಪಿಗೆ ಬಂದು ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಇವರ ವಾಹನವು ಧರ್ಮಸ್ಥಳದಿಂದ ಕಾರ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ತೂಫಾನ್ ವಾಹನದಲ್ಲಿ ಒಂದು ಮಗು ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದು ಇವರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಒಬ್ಬರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಕಾರ್ಕಳದ ಆಸ್ಪತ್ರೆಗೆ ದಾಖಲಾಗಿದೆ. ಉಳಿದ ಗಾಯಾಳುಗಳು ಕೂಡ ಕಾರ್ಕಳದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.





