ಕಾರ್ಕಳ: ಅಕ್ರಮ ದಾಸ್ತಾನು; 38 ಕೆಜಿ ಸ್ಫೋಟಕ ವಸ್ತು ವಶ

ಕಾರ್ಕಳ, ನ.12: ಇಲ್ಲಿನ ಸಚ್ಚರಿಪೇಟೆ ಎಂಬಲ್ಲಿರುವ ಅಂಗಡಿಯೊಂದರಲ್ಲಿ ನಿಯಮ ಉಲ್ಲಂಘಿಸಿ ದಾಸ್ತಾನು ಇರಿಸಿದ್ದ ಸಾವಿರಾರು ರೂ. ಮೌಲ್ಯದ ಸ್ಫೋಟಕ ವಸ್ತುಗಳನ್ನು ಕಾರ್ಕಳ ಪೊಲೀಸರು ನ.11ರಂದು ರಾತ್ರಿ ವೇಳೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಸ್ಫೋಟಕ ನಿಯಮಗಳ ಪ್ರಕಾರ ಪರವಾನಿಗೆ ಪಡೆದುಕೊಂಡು ಕೆಮಿಕಲ್ ಕಡಿಮೆ ಇರುವ ಹಸಿರು ಪಟಾಕಿಗಳನ್ನು ದಾಸ್ತಾನು ಮಾಡಬೇಕಾಗಿದ್ದು, ಅದಕ್ಕೆ ಪ್ರತ್ಯೇಕವಾದ ಗೋಡಾನ್ ಮಾಡಿ 7 ಅಡಿ ಎತ್ತರದ ಕಂಪೌಂಡನ್ನು ಗೋಡಾನಿನ ಸುತ್ತಲೂ ನಿರ್ಮಿಸಬೇಕಾಗಿದೆ. ಅಲ್ಲದೆ ಗೋಡಾನಿನ ಸುತ್ತಲೂ 100 ಮೀಟರ್ ದೂರದಲ್ಲಿ ಯಾವುದೇ ವಾಸದ ಮನೆಗಳು ಇರದಂತೆ ನಿಯಮಗಳಿವೆ.
ಇವುಗಳನ್ನು ಉಲ್ಲಂಘಿಸಿ ಶ್ರೀನಿವಾಸ ಕಾಮತ್(50) ಎಂಬವರು ಸಚ್ಚರಿಪೇಟೆ ಯಲ್ಲಿರುವ ಆತನ ಶ್ರೀನವದುರ್ಗಾ ಫ್ಯಾನ್ಸಿ ಮತ್ತು ಜನರಲ್ ಸ್ಟೋರ್ಸ್‌ನಲ್ಲಿ ಸ್ಫೋಟಕ ವಸ್ತುಗಳನ್ನು ದಾಸ್ತಾನು ಇರಿಸಿದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದ ಪೊಲೀಸರು, ಸುಮಾರು 41370ರೂ. ಮೌಲ್ಯದ 38 ಕೆ.ಜಿ. ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





