ಕಾರ್ಕಳ | ಆಳ್ವಾಸ್ ನುಡಿಸಿರಿ–ವಿರಾಸತ್ ಸಾಂಸ್ಕೃತಿಕ ವೈಭವ ಉದ್ಘಾಟನೆ

ಕಾರ್ಕಳ : ಆಳ್ವಾಸ್ ಕೇವಲ ಶಿಕ್ಷಣಕ್ಕೆ ಸೀಮಿತವಾಗಿಲ್ಲ. ಇದು ಉಚಿತ ಶಿಕ್ಷಣ, ಸಂಸ್ಕೃತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ರಾಜ್ಯ–ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿರುವ ಪ್ರತಿಷ್ಠಿತ ಸಂಸ್ಥೆ ಎಂದು ಖ್ಯಾತ ಉದ್ಯಮಿ ಬರೋಡಾ ಶಶಿಧರ ಶೆಟ್ಟಿ ಹೇಳಿದರು.
ಅವರು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಆಳ್ವಾಸ್ ನುಡಿಸಿರಿ–ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ಪ್ರೊ.ಎಂ.ರಾಮಚಂದ್ರ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಮೋಹನ್ ಅಳ್ವಾರಿಗೆ ಸರಿಸಾಟಿಯೇ ಇಲ್ಲ. ಅವರ ಜನಪರ ಸ್ವಭಾವ, ಸರಳತೆ, ಮಹತ್ವಾಕಾಂಕ್ಷೆಯ ಕೆಲಸಗಳು ಆಳ್ವಾಸ್ ಅನ್ನು ವಿಶಿಷ್ಟವಾಗಿಸಿವೆ. ಆಳ್ವಾಸ್ ಸಂಸ್ಥೆಯ ಹಿರಿಮೆ ಅದರ ವ್ಯಾಪಕ ಶಿಕ್ಷಣ ವ್ಯವಸ್ಥೆ, ಸಾಂಸ್ಕೃತಿಕ ಉತ್ಸವಗಳು ಮತ್ತು ಕನ್ನಡ ನಾಡು–ನುಡಿ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾಡಿದ ಅದ್ಭುತ ಸೇವೆಯಲ್ಲಿ ಇದೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಮೋಹನ್ ಅಳ್ವಾ ಮಾತನಾಡಿ, ಕಾರ್ಕಳ ಘಟಕದ ವೇದಿಕೆಗೆ ನನ್ನ ಗುರುವರ್ಯರಾದ ಕವಿ ಎಂ.ರಾಮಚಂದ್ರರ ಹೆಸರಿಡಲಾಗಿದೆ. ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವವರು. ಆಳ್ವಾಸ್ ವಿರಾಸತ್ 30 ವರ್ಷಗಳಿಂದ ನಡೆಯುತ್ತಾ ಈಗ ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ. ದೇಶವಿದೇಶಗಳಲ್ಲಿ 88 ಕಡೆಗಳಲ್ಲಿ ನುಡಿಸಿರಿವಿರಾಸತ್ ಘಟಕಗಳನ್ನು ರೂಪಿಸಲಾಗಿದೆ. ಫೆಬ್ರವರಿ ಅಂತ್ಯದೊಳಗೆ 50 ಘಟಕಗಳಲ್ಲಿ ವೈಭವಯುತ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಈ ಸಾಂಸ್ಕೃತಿಕ ವೈಭವದ ಮೂಲಕ ಯುವಪೀಳಿಗೆಗೆ ಏಕತೆ–ಸಾಮರಸ್ಯದ ಸಂದೇಶವನ್ನು ತಲುಪಿಸುವುದು ನಮ್ಮ ಉದ್ದೇಶ. ಜಾತಿ, ಧರ್ಮ, ಭಾಷೆ ಮೀರಿದ ಭಾರತದ ಸಂಪ್ರದಾಯವನ್ನು ತೋರಿಸುವುದು ನಮ್ಮ ಗುರಿ. ಆಳ್ವಾಸ್ ಅನ್ನು ‘ಮಿನಿ ಇಂಡಿಯಾ’ ಆಗಿ ರೂಪಿಸುವ ಕನಸು ನಮ್ಮದು. 144 ಕೋಟಿ ಜನಸಂಖ್ಯೆಯ ದೇಶದಲ್ಲಿ 52 ಕೋಟಿ ಯುವಕರಿದ್ದಾರೆ. ಉತ್ತಮ ಸಂಸ್ಕಾರ, ಸಮರ್ಪಣೆ ಮತ್ತು ದೇಶಭಕ್ತಿಯನ್ನು ಬೆಳೆಸುವ ಕಾರ್ಯಕ್ಕೆ ಆಳ್ವಾಸ್ ಬದ್ಧ ಎಂದು ಹೇಳಿದರು.
ಶಾಸಕ ಹಾಗೂ ನುಡಿಸಿರಿ–ವಿರಾಸತ್ ಘಟಕದ ಗೌರವಾಧ್ಯಕ್ಷ ವಿ.ಸುನೀಲ್ ಕುಮಾರ್ ಮಾತನಾಡಿ, ಅಳ್ವಾಸ್ ದೊಡ್ಡ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಹತ್ತರ ಕೊಡುಗೆ ನೀಡುತ್ತಿದೆ. ಅಂಕಪಟ್ಟಿ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ, ಕ್ರೀಡೆ, ಸಂಸ್ಕೃತಿ, ರಾಷ್ಟ್ರೀಯತೆ, ಸಾಮರಸ್ಯವನ್ನು ಸಾರುತ್ತಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯ ಅಳ್ವಾಸ್ ಮೂಲಕ ನಡೆಯುತ್ತಿದೆ. ನವಭಾರತ ಕಟ್ಟುವ ಕನಸಿಗೆ ನಾವು ಎಲ್ಲರೂ ಹೆಜ್ಜೆ ಹಾಕೋಣ ಎಂದರು.
ಈ ವರ್ಷದ ಸಾಂಸ್ಕೃತಿಕ ವೈಭವವನ್ನು ಕೀರ್ತಿಶೇಷ ಎಂ.ಕೆ.ವಿಜಯಕುಮಾರ್ ಅವರ ಸ್ಮರಣೆಗೆ ಅರ್ಪಿಸಲಾಯಿತು.
ಅತಿಥಿಗಳಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ ನುಡಿಸಿರಿ–ವಿರಾಸತ್ ಕಾರ್ಕಳ ಘಟಕದ ಅಧ್ಯಕ್ಷ ವಿಜಯ ಶೆಟ್ಟಿ, ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್., ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಗುಣಪಾಲ ಕಡಂಬ, ದಿನೇಶ್ ಜಿ.ಡಿ., ಮುನಿರಾಜ ರೆಂಜಾಳ, ರಾಜ್ಯ ಕಲ್ಲುಕ್ವಾರಿ ಫೆಡರೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಸುಗ್ಗಿ ಸುಧಾಕರ ಶೆಟ್ಟಿ, ಕ್ರಿಯೇಟಿವ್ ಕಾಲೇಜಿನ ಗಣನಾಥ ಶೆಟ್ಟಿ, ಜ್ಞಾನಸುಧ ಶಿಕ್ಷಣ ಸಂಸ್ಥೆಯ ಸುಧಾಕರ ಶೆಟ್ಟಿ ಬಜಗೋಳಿ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೊಟ್ಯಾನ್, ಮುನಿರಾಜ ರೆಂಜಾಳ, ಅಂಬರೀಶ್ ಚಿಪ್ಳುಣ್ಕರ್ ಮತ್ತು ಕೋಶಾಧಿಕಾರಿ ಎಸ್. ಪಾರ್ಶ್ವನಾಥ್ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆ ವೆಣುಗೋಪಾಲ್ ನಡೆಸಿದರು. ಕಸಾಪ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಧನ್ಯವಾದ ಅರ್ಪಿಸಿದರು.
ವೈವಿಧ್ಯಮಯ ಕಲಾರೂಪಗಳ ವೈಭವ :
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಭಾರತೀಯ ಕಲಾ ಪ್ರಕಾರಗಳ ಮನಮುಟ್ಟುವ ಪ್ರದರ್ಶನ ನೀಡಿದರು.ಯೋಗ ದೀಪಿಕಾ ,ಅಷ್ಟಲಕ್ಷ್ಮಿ ಶಾಸ್ತ್ರೀಯ ನೃತ್ಯ ಬಡಗುತಿಟ್ಟು ಯಕ್ಷಗಾನ ‘ಶಂಕರಾರ್ಧ ಶರೀರಿಣಿ’ ಗುಜರಾತಿನ ದಾಂಡಿಯಾಮಣಿಪುರಿ ಸ್ಟಿಕ್ ಡಾನ್ಸ್ ಮಲ್ಲಕಂಬ ಹಾಗೂ ಕಸರತ್ತು ಸೃಜನಾತ್ಮಕ ನೃತ್ಯಡೊಳ್ಳು ಕುಣಿತ , ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ‘ಹಿರಣ್ಯಾಕ್ಷ ವಧೆ’, ಬೊಂಬೆ ವಿನೋದಾವಳಿ, ಇತ್ಯಾದಿ ವಿವಿಧ ಕಲಾರೂಪಗಳು ವೇದಿಕೆಯ ರಂಗು ಹೆಚ್ಚಿಸಿವೆ.
ಕಾರ್ಯಕ್ರಮವು ಆಳ್ವಾಸ್ ವಿದ್ಯಾರ್ಥಿಗಳ ಸಿಂಗಾರಿ ಮೇಳ–ಫ್ಯೂಷನ್ ವಿನೋದಾವಳಿಯೊಂದಿಗೆ ಆರಂಭಗೊಂಡು, ಆಕರ್ಷಕ ಬೊಂಬೆ ಸಿಡಿಮದ್ದಿನ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.







