ಮನುಷ್ಯತ್ವ ಬೆಳೆಸುವ ಶಿಕ್ಷಣ ಇಂದಿನ ಅಗತ್ಯ: ಕೇಮಾರು ಸ್ವಾಮೀಜಿ
ಕುಕ್ಕುಂದೂರು ಕೆಎಂಇಎಸ್ ಶಿಕ್ಷಣ ಸಂಸ್ಥೆಗಳ ನೂತನ ಕಟ್ಟಡ ಲೋಕಾರ್ಪಣೆ

ಕಾರ್ಕಳ, ಮೇ 11: ಶಿಕ್ಷಣ ಎಂಬುದು ಕೇವಲ ಪದವಿ ಮಾತ್ರ ಅಲ್ಲ, ಮಕ್ಕಳಲ್ಲಿ ಮಾನವೀಯ ಮೌಲ್ಯ ಗಳೊಂದಿಗೆ ಮನುಷ್ಯತ್ವವನ್ನು ಬೆಳೆಸಬೇಕು. ಶಿಕ್ಷಣವು ಜಾತಿ ಧರ್ಮ ಬೇಧವಿಲ್ಲದೆ ನಮ್ಮೆಲ್ಲರನ್ನು ಒಂದಾಗಿಸಬೇಕು. ಆ ಕಾರ್ಯವನ್ನು ಕೆಎಂಇಎಸ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವುದು ಅಭಿನಂದನೀಯ ಎಂದು ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧಾನಾಶ್ರಮದ ಶ್ರೀಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಕಾರ್ಕಳ ಕುಕ್ಕುಂದೂರಿನ ಪ್ರತಿಷ್ಠಿತ ಕೆಎಂಇಎಸ್ ಶಿಕ್ಷಣ ಸಂಸ್ಥೆಗಳ ನೂತನ ಕಟ್ಟಡ ಸಮುಚ್ಚಯವನ್ನು ರವಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಶಿಕ್ಷಣ ಎಂಬುದು ಆತ್ಮಶಕ್ತಿ ತುಂಬಿಸುವ ಕಾರ್ಯ ಮಾಡಬೇಕು. ಪ್ರಮಾಣ ಪತ್ರದಲ್ಲಿ ನಾವು ಪ್ರಥಮ ಬರುವುದಕ್ಕಿಂತ ಜೀವನದಲ್ಲಿ ಪ್ರಥಮ ಬರಬೇಕು. ಅದಕ್ಕೆ ಮನುಷ್ಯರಾಗಿ ಬದುಕುವ ಶಿಕ್ಷಣ ದೊರೆಯಬೇಕು ಎಂದರು.
ಈ ಶಾಲೆಯಲ್ಲಿ ಬಡವರಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ. ಬಡವರಿಗೆ ನೀಡುವ ವಿದ್ಯೆಯು ದೇವರಿಗೆ ಸಲ್ಲಿಸುವ ನಿಜವಾದ ಸೇವೆಯಾಗಿದೆ. ಆ ಕಾರ್ಯವನ್ನು ಈ ವಿದ್ಯಾಸಂಸ್ಥೆ ಮಾಡುತ್ತಿದೆ. ನಮ್ಮ ಮಠದಿಂದ ಶಾಲೆ ನಿರ್ಮಿಸಲು ಬೇಕಾದ ಜಾಗ ಖರೀದಿಸಲು ದೊಡ್ಡ ಮಟ್ಟದಲ್ಲಿ ನೆರವು ನೀಡಿದವರು ಕೆಎಸ್ ನಿಸ್ಸಾರ್ ಅಹ್ಮದ್ ಹಾಗೂ ಕೆಎಸ್ ಇಮ್ತಿಯಾಝ್ ಅಹ್ಮದ್. ಅವರ ಹೃದಯ ವೈಶಾಲ್ಯ ಮೆಚ್ಚುವಂತದ್ದು ಎಂದು ಸ್ವಾಮೀಜಿ ತಿಳಿಸಿದರು.
ನೂತನ ಪ್ರೌಢ ಶಾಲಾ ಕಟ್ಟಡವನ್ನು ಉದ್ಘಾಟಿಸಿದ ಮಾಜಿ ಸಚಿವ, ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿ, ಈ ವಿದ್ಯಾ ಸಂಸ್ಥೆ ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಕಾರ್ಯ ಮಾಡುತ್ತಿದೆ. ಶಿಕ್ಷಣ ನಮ್ಮೆಲ್ಲರ ಬದುಕು ರೂಪಿಸಬೇಕು ಮತ್ತು ಆ ಮೂಲಕ ಆ ಶಿಕ್ಷಣ ಸಂಸ್ಥೆ ಕೂಡ ಬೆಳೆಯಬೇಕು. ಹೀಗೆ ಕಾರ್ಕಳದ ಮಕ್ಕಳಿಗೆ ಈ ಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುತ್ತಿದೆ. ಇದೀಗ ಶಿಕ್ಷಣಕ್ಕೆ ಪೂರಕವಾದ ಎಲ್ಲ ರೀತಿಯ ವಾತಾವರಣವನ್ನು ಇಲ್ಲಿ ರೂಪಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂಸ್ಥೆಯನ್ನು ಆರಂಭದ ದಿನಗಳಿಂದ ಈವರೆಗೆ ಇಷ್ಟು ಎತ್ತರಕ್ಕೆ ಬೆಳೆಸುವುದರಲ್ಲಿ ಕೆಎಸ್ ನಿಸ್ಸಾರ್ ಅಹ್ಮದ್ ಅವರ ಕೊಡುಗೆ ಅಪಾರ. ಅವರು ಎಳೆಯ ಮರೆಯ ಕಾಯಿಯಂತೆ ಕಾರ್ಕಳದಲ್ಲಿ ಹಲವು ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯ ನೀಡುತ್ತಾ ಬಂದಿದ್ದಾರೆ. ಕೊರೋನಾ ಸಂದರ್ಭದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್‌ನ್ನು ಅವರು ನಿರ್ಮಿಸಿ ಕೊಟ್ಟಿದ್ದಾರೆ. ಈ ಮೂಲಕ ಅವರು ಕಾರ್ಕಳಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ನವೀಕೃತ ಪ್ರಾಥಮಿಕ ಕಟ್ಟಡವನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲ್ ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್, ಆಡಿಟೋರಿಯಂನ್ನು ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಕಾರ್ಕಳ ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಕೀರ್ತಿನಾಥ್ ಬಳ್ಳಾಲ್ ಉದ್ಘಾಟಿಸಿದರು.
ಪಿಯುಸಿ ವಿಭಾಗದ ನವೀಕೃತ ಕಟ್ಟಡವನ್ನು ಯು.ಎಸ್. ಚಿಕಾಗೋ ಪ್ರೊವೈನ್ಸ್ ಸೊಸೈಟಿ ಆಫ್ ದಿ ದಿವೈನ್ ಲೈಪ್‌ನ ಧರ್ಮಗುರು ರೆ.ಫಾ.ವ್ಯಾಲೆಸ್ ಪ್ರಜ್ವಲ್ ಅರನ್ಹಾ ಎಸ್.ವಿ.ಡಿ., ಕಂಪ್ಯೂಟರ್ ಲ್ಯಾಬ್ ಕಟ್ಟಡವನ್ನು ಅತ್ತೂರು ಅಲ್ ಹವ್ವಾ ಮಸೀದಿಯ ಧರ್ಮಗುರು ಮೌಲಾನ ಅಬ್ದುಲ್ ಹಫೀಝ್ ಅಲ್ ಖಾಸಿಮಿ, ಪ್ರಾಂಶುಪಾಲರ ಕೊಠಡಿಯನ್ನು ಕೆ.ಎಸ್.ನಿಸ್ಸಾರ್ ಅಹ್ಮದ್ ಅವರ ಸಹೋದರ ಉದ್ಯಮಿ ಕೆ.ಎಸ್.ಫಝಲ್ ರಹ್ಮಾನ್ ಉದ್ಘಾಟಿಸಿದರು.
ಗ್ರಂಥಾಲಯ ಕಟ್ಟಡವನ್ನು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರೀಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಶಿಕ್ಷಕರ ಕೊಠಡಿಯನ್ನು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮುಖ್ಯಸ್ಥ ಬಾಲಕೃಷ್ಣ, ಪ್ರಾಥಮಿಕ ಶಾಲಾ ಕಂಪ್ಯೂಟರ್ ಲ್ಯಾಬ್‌ನ್ನು ಕುಕ್ಕುಂದೂರು ಗ್ರಾಪಂ ಅಧ್ಯಕ್ಷೆ ಉಷಾ ಕೆ., ಮುಖ್ಯೋಪಾಧ್ಯಾಯರ ಕೊಠಡಿಯನ್ನು ಕಾಲೇಜಿನ ಹಳೆ ವಿದ್ಯಾರ್ಥಿನಿ, ಮಿಸ್ ಕರ್ನಾಟಕ ಸ್ಟೈಲ್ ಐಕಾನ್ ಅಪೇಕ್ಷಾ ವಿ.ಹೆಗ್ಡೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 345ನೇ ರ‍್ಯಾಂಕ್ ಪಡೆದ ಕಾಲೇಜಿನ ಹಳೆ ವಿದ್ಯಾರ್ಥಿ ಶೌಕತ್ ಅಝೀಮ್ ಕಾರ್ಕಳ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ವಿವಿಧ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು, ಸಂಸ್ಥೆಯಲ್ಲಿ ಸುದೀರ್ಘ ಸೇವೆಗೈದ ಪ್ರಮುಖರನ್ನು ಗೌರವಿಸಲಾಯಿತು.
ಕೆಎಂಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಕೊಡುಗೈದಾನಿ ಕೆ.ಎಸ್. ಇಮ್ತಿಯಾಝ್ ಅಹ್ಮದ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಲಿಟಾ ಝಿನಾ ಡಿಸಿಲ್ವ ಸ್ವಾಗತಿಸಿದರು. ಪ್ರಭಾರ ಪ್ರಾಶುಂಪಾಲೆ ಪಾಟ್ಕರ್ ವಂದಿಸಿದರು. ಶಿಕ್ಷಕಿ ನಳಿನಿ ಆಚಾರ್ಯ ಹಾಗೂ ಪ್ರಕಾಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಕೆಎಸ್ ನಿಸ್ಸಾರ್ ಅಹ್ಮದ್ ರಾಷ್ಟ್ರಪ್ರಶಸ್ತಿಗೆ ಅರ್ಹರು
ಉರ್ದು ಶಾಲೆಯ ಸಣ್ಣ ಕೊಠಡಿಯಲ್ಲಿ 1984ರಲ್ಲಿ ಸ್ಥಾಪನೆಗೊಂಡ ಈ ವಿದ್ಯಾ ಸಂಸ್ಥೆ ಇದೀಗ ಇಷ್ಟು ಎತ್ತರಕ್ಕೆ ಬೆಳೆಯಲು ಹಲವರ ಶ್ರಮ ಇದೆ. ಆದರೆ ಇದಕ್ಕೆ ಎಲ್ಲ ರೀತಿಯಲ್ಲೂ ಪ್ರೋತ್ಸಾಹ, ಬೆಂಬಲ, ಸಹಕಾರ ನೀಡಿದ ಕೆಎಸ್ ನಿಸ್ಸಾರ್ ಅಹ್ಮದ್ ಈ ಸಂಸ್ಥೆಯ ಬೆನ್ನೆಲುಬು ಆಗಿದ್ದಾರೆ. ಅವರ ಸಹಕಾರ ಇಲ್ಲದಿದ್ದರೆ ಈ ವಿದ್ಯಾಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಕೆಎಂಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಸ್.ಇಮ್ತಿಯಾಝ್ ಅಹ್ಮದ್ ತಿಳಿಸಿದರು.
ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯ ಬೇಕು ಎಂಬುದು ಕೆಎಸ್ ನಿಸ್ಸಾರ್ ಅಹ್ಮದ್ ಅವರ ಸಂಕಲ್ಪ ಆಗಿತ್ತು. ಆ ನಿಟ್ಟಿನಲ್ಲಿ ಅವರು ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಈ ವಿದ್ಯಾ ಸಂಸ್ಥೆಯ ಮೂಲಕ ಒದಗಿಸಿದರು. ಇಲ್ಲಿ ಸಾವಿರಾರು ಮಕ್ಕಳು ಉತ್ತಮ ಶಿಕ್ಷಣ ಪಡೆದು, ಇದೀಗ ಡಾಕ್ಟರ್, ಇಂಜಿನಿಯರ್, ರಾಜಕಾರಣಿ, ಪೊಲೀಸ್ ಐಎಎಸ್ ಅಧಿಕಾರಿಗಳಾಗಿ ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.
ಕೆಎಸ್ ನಿಸ್ಸಾರ್ ಅಹ್ಮದ್ ಕೇವಲ ವಿದ್ಯಾ ಸಂಸ್ಥೆಗಳಿಗೆ ಮಾತ್ರವಲ್ಲ, ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಎಂಬ ಬೇಧಭಾವ ಇಲ್ಲದೆ ಎಲ್ಲರಿಗೆ ನೆರವು ನೀಡಿದ್ದಾರೆ. ದೈವಸ್ಥಾನಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಬಡ ಮಕ್ಕಳಿಗೆ ವಿವಾಹ, ಮನೆ ನಿರ್ಮಾಣ, ವಾಹನ ಖರೀದಿ ಮಾಡಿಸಿ ಕೊಟ್ಟಿದ್ದಾರೆ. ಈ ರೀತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೆಎಸ್ ನಿಸ್ಸಾರ್ ಅಹ್ಮದ್ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು. ಇವರ ಅದಕ್ಕೆ ಅರ್ಹ ವ್ಯಕ್ತಿ. ಯಾವುದೇ ಪ್ರಚಾರ ಇಲ್ಲದೆ ಎಲೆಯ ಮರೆಯ ಕಾಯಿಯಂತೆ ತನ್ನ ಸಮಾಜ ಸೇವೆಯನ್ನು ಮಾಡಿಕೊಂಡು ಅವರು ಬರುತ್ತಿದ್ದಾರೆ ಎಂದು ಅವರು ಹೇಳಿದರು.







