ಕಾರ್ಕಳ ಪುರಸಭೆಗೆ ಸಾರ್ವಜನಿಕರಿಂದ ಮುತ್ತಿಗೆ

ಕಾರ್ಕಳ: ಕುಡಿಯುವ ನೀರು ಸರಬರಾಜು ಹಾಗೂ ರಸ್ತೆ ದುಸ್ಥಿತಿಗೆ ಸಂಬಂಧಿಸಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಎನ್‌ಡಬ್ಲ್ಯೂಎಸ್‌ಬಿ) ಕಳೆದ ಒಂದು ವರ್ಷದಿಂದ ಅವೈಜ್ಞಾನಿಕವಾಗಿ ರಸ್ತೆಗಳನ್ನು ಅಗೆದು ಪೈಪ್‌ಲೈನ್‌ಗಳನ್ನು ಹಾನಿಗೊಳಿಸಿ, ನಳ್ಳಿ ನೀರಿನ ಸಂಪರ್ಕ ಕಡಿತಗೊಳಿಸಿದೆ ಎಂದು ಆರೋಪಿಸಲಾಯಿತು.
ಅಮೃತ್ ಯೋಜನೆಯ ಕಳಪೆ ಕಾಮಗಾರಿಯಿಂದ ನಗರದಲ್ಲಿನ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಬಂಗ್ಲೆಗುಡ್ಡೆ, ಪತ್ತೊಂಜಿಕಟ್ಟೆ, ಗುಂಡ್ಯ ಹಾಗೂ ಕಜೆ ಪ್ರದೇಶಗಳಲ್ಲಿ ನೀರಿಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಳ್ಳಿಗಳಲ್ಲಿ ಬರುವ ನೀರು ಕುಡಿಯಲು ಅಸಾಧ್ಯವಾಗಿದ್ದು, ಕೆಸರು ನೀರು ಬರುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ನಿಕಟ ಪೂರ್ವ ಸದಸ್ಯೆ ಪ್ರತಿಮಾ ಮೋಹನ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಸಮಸ್ಯೆಗೆ ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮಂಗಳೂರು ನಗರ ನೀರು ಸರಬರಾಜು ಮಂಡಳಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ರೆಹಮತ್ ನವೀದ್ ನಾಸಿರ್ ಶೇಖ್, ನಿಕಟ ಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್, ಸದಸ್ಯರಾದ ವಿವೇಕಾನಂದ ಶೆಣೈ, ಸಾಮಾಜಿಕ ಮುಂದಾಳು ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.







