ಕಾರ್ಕಳ | ಪಳ್ಳಿ ಬೆಳ್ಳೆ ಬಸ್ ಸೇವೆ ಪುನರಾರಂಭ: ಶುಭದ ರಾವ್ ಅಭಿನಂದನೆ

ಕಾರ್ಕಳ : ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಮೂಲಕ ಆರಂಭಗೊಂಡಿದ್ದ ಪಳ್ಳಿ ಬೆಳ್ಳೆ ಸರ್ಕಾರಿ ಬಸ್ ಸಂಚಾರವು ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದು, ಇದೀಗ ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಅವರ ಸತತ ಪ್ರಯತ್ನದ ಫಲವಾಗಿ ಮತ್ತೆ ಈ ಭಾಗದಲ್ಲಿ ಬಸ್ ಸಂಚಾರ ಆರಂಭಗೊಂಡಿದೆ.
ಬಸ್ ಸಂಚಾರದ ಸ್ಥಗಿತದಿಂದ ವಿದ್ಯಾರ್ಥಿಗಳಿಗೆ, ದೈನಂದಿನ ಉದ್ಯೋಗಕ್ಕೆ ತೆರಳುವವರಿಗೆ ತೀವ್ರ ತೊಂದರೆಯಾಗಿದ್ದು ಸಾರ್ವಜನಿಕರು ಈ ಬಗ್ಗೆ ಹಲವಾರು ಬಾರಿ ಮನವಿಯನ್ನು ಮಾಡಿದ್ದರು, ಸಾರ್ವಜನಿಕರ ಸಮಸ್ಯೆಯನ್ನು ಮನಗಂಡು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಅವರು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆಯಲ್ಲಿ ಪಳ್ಳಿ ಬೆಳ್ಳೆ ಮಾರ್ಗವಾಗಿ ಪುನರ್ ಬಸ್ ಸಂಚಾರಕ್ಕೆ ಅಧಿಕಾರಿಗಳ ಗಮನ ಸೆಳೆದಿದ್ದರು. ಬಸ್ ಸಂಚಾರ ಆರಂಭ ಮಾಡದಿದ್ದರೆ ಅಧಿಕಾರಿಗಳ ಸಮ್ಮುಖದಲ್ಲಿ ಧರಣಿ ಕುಳಿತುಕೊಳ್ಳುವ ಎಚ್ಚರಿಕೆಯನ್ನು ಕೂಡ ನೀಡಿದ್ದರು.
ಅಜಿತ್ ಹೆಗ್ಡೆಯವರು ಅಂದಿನ ಸಭೆಯಲ್ಲಿ ಆಡಿದ ಮಾತು ರಾಜ್ಯ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಶಾಸಕ ಹೆಚ್.ಎಮ್. ರೇವಣ್ಣ ಅವರಿಗೆ ತಲುಪಿದ್ದು ತಕ್ಷಣ ರೇವಣ್ಣ ಹಾಗೂ ರಾಜ್ಯ ಉಪಾದ್ಯಕ್ಷರಾದ ಪುಷ್ಪಾ ಅಮರನಾಥ್ ಅವರು ಜಿಲ್ಲಾಡಳಿತಕ್ಕೆ ಸೂಚನೆಯನ್ನು ನೀಡಿ ಪಳ್ಳಿ ಬೆಳ್ಳೆ ಮಾರ್ಗವಾಗಿ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಮಾಡಿದ್ದಾರೆ.
ಪಳ್ಳಿ ಬೆಳ್ಳೆ ಭಾಗದ ಸಾರ್ವಜನಿಕರ ಮನವಿಯ ಮೇರೆಗೆ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆಯವರ ವಿನಂತಿಗೆ ಪೂರಕವಾಗಿ ಸ್ಪಂದಿಸಿ ಬಸ್ ಸಂಚಾರವನ್ನು ಪುನರ್ ಆರಂಭಿಸುವಲ್ಲಿ ಸಹಕಾರ ನೀಡಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಗ್ಯಾರಂಟಿ ಸಮಿತಿಯ ರಾಜ್ಯಾಧ್ಯಕ್ಷರಾದ ರೇವಣ್ಣ, ಉಪಾದ್ಯಕ್ಷ
ಪುಷ್ಪಾ ಅಮರನಾಥ್ ಅವರಿಗೆ, ಬಸ್ ಸಂಚಾರಕ್ಕೆ ಭಗೀರಥ ಪ್ರಯತ್ನ ನಡೆಸಿದ ಅಜಿತ್ ಹೆಗ್ಡೆ ಮಾಳ ಅವರಿಗೆ ಸಾರ್ವಜನಿಕರ ಪರವಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಅಭಿನಂದನೆ ಸಲ್ಲಿಸಿದ್ದಾರೆ.







