ಕಾರ್ಕಳ: 13 ವರ್ಷಗಳಿಂದ ನಾಪತ್ತೆಯಾಗಿದ್ದ ಬಾಲಕನನ್ನು ಪತ್ತೆ ಹಚ್ಚಿದ ಪೊಲೀಸರು

ಉಡುಪಿ, ಅ.8: ಸುಮಾರು 13 ವರ್ಷಗಳ ಹಿಂದಿನ ನಾಪತ್ತೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, 2012ರಲ್ಲಿ ಕಾರ್ಕಳದಿಂದ ನಾಪತ್ತೆಯಾಗಿದ್ದ ಯುವಕನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ್ದಾರೆ.
ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರಭಾಕರ ಪ್ರಭು ಎಂಬವರ ಮಗ ಅನಂತ ಕೃಷ್ಣ ಪ್ರಭು(16) ಎಂಬಾತ 2012ರ ಡಿ.6ರಂದು ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೊದವನು ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದನು. ಈ ಬಗ್ಗೆ ಪ್ರಭಾಕರ ಪ್ರಭು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಈ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಖಚಿತ ಮಾಹಿತಿಯಂತೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದ ಅನಂತಕೃಷ್ಣ ಪ್ರಭು(29)ನನ್ನು ಪತ್ತೆ ಹಚ್ಚಿದ್ದಾರೆ. ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಬ್ರಹ್ಮಾವರ ಪೊಲೀಸ್ ಉಪ ನಿರೀಕ್ಷಕ ಸುದರ್ಶನ್ ದೊಡಮನಿ, ಉಡುಪಿ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕ ಈರಣ್ಣ ಶಿರಗುಂಪಿ, ಸಿಬ್ಬಂದಿ ಇಮ್ರಾನ್, ಚೇತನ್, ಸಂತೋಷ್ ದೇವಾಡಿಗ ಮತ್ತು ಮಲ್ಲಯ್ಯ ಹಿರೇಮಠ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.







