ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕಾರ್ಕಳ : ಕಾರ್ಕಳ ಹಿರ್ಗಾನದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ರವಿವಾರ ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.
ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವಿ ಸುನಿಲ್ ಕುಮಾರ್, ಸಾಹಿತ್ಯ ಎನ್ನುವುದು ನಿರಂತರವಾಗಿ ನಡೆಯುವ ಕೃಷಿ. ಇಂದಿನ ಯುವ ಪೀಳಿಗೆಗೆ ಕನ್ನಡ ಸಾಹಿತ್ಯದ ಸೊಗಡನ್ನು ಪರಿಚಯಿಸುವ ಮತ್ತು ಅವರಲ್ಲಿ ಓದಿನ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತುಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕಿದೆ. ಸಾಹಿತ್ಯಕ್ಕೆ ಜನರನ್ನು ಒಂದಾಗಿಸುವ ಮತ್ತು ಆಕರ್ಷಿಸುವ ಅದ್ಭುತ ಶಕ್ತಿಯಿದೆ. ಈ ಶಕ್ತಿಯನ್ನು ಬಳಸಿಕೊಂಡು ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸಬೇಕು. ಎಲ್ಲ ಪ್ರಾದೇಶಿಕ ಭಾಷೆಗಳು ನಮ್ಮ ಸಂಸ್ಕೃತಿಯ ಜೀವನಾಡಿಯಾಗಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಭಾಷೆಗಳ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆಯಿದೆ ಎಂದರು.
ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ. ಪದ್ಮನಾಭ ಗೌಡ ಅವರು ಡಾ. ಮಾಲತಿ ಜಿ. ಪ್ರಭು ಅವರ 'ನನ್ನೊಳಗಿನ ನಾನು', ಆರ್. ರಮೇಶ್ ಪ್ರಭು ಅವರ 'ಮನದಾಳದ ಮುತ್ತುಗಳು' ಹಾಗೂ ಶ್ರೀಧರ್ ಗೋರೆ ನೆಲ್ಯಾಡಿ ಅವರ 'ದ್ರೇಷ್ಕಾಣ ಫಲ ಸಂಚಯ' ಎಂಬ ಮೂರು ಪುಸ್ತಕ ಬಿಡುಗಡೆಗೊಳಿಸಲಾಯಿತು.
ಸಾಹಿತಿ ಸಿದ್ದಾಪುರ ವಾಸುದೇವ ಭಟ್ಟ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ, ಡಾ. ರವೀಂದ್ರ ಪ್ರಭು ಬಜಗೋಳಿ ಪ್ರಮುಖರಾದ ಪ್ರೊ. ಕೆ. ಗುಣಪಾಲ ಕಡಂಬ, ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್.ಆರ್., ಖ್ಯಾತ ಸಾಹಿತಿ ಎಚ್. ದುಂಡಿರಾಜ್, ಜ್ಯೋತಿ ಪದ್ಮನಾಭ ಬಂಡಿ, ನ್ಯಾಯವಾದಿ ಎಂ.ಕೆ. ಸುವೃತ್ ಕುಮಾರ್, ಅಶ್ವಥ್ ಎಸ್.ಎಲ್., ಸುನಿತಾ, ಬಿ. ಪುಂಡಲೀಕ ಮರಾಠೆ, ಶ್ರೀನಿವಾಸ ಭಂಡಾರಿ, ಗಿರೀಶ್ ರಾವ್ ಹಾಗೂ ದೇವದಾಸ್ ಕೆರೆಮನೆ , ವಿದ್ವಾನ್ ಗಣಪತಿ ಭಟ್, ವಿಜಯ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿದರೆ, ಗಣೇಶ್ ಜಾಲ್ಸೂರು ನಿರ್ವಹಿಸಿದರು.
ಸಮ್ಮೇಳನದ ಅಂಗವಾಗಿ ಪೂರ್ವಾಹ್ನ 8 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣವನ್ನು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಿತಾ ಪೂಜಾರಿ ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷರ ಗೌರವಪೂರ್ವಕ ಸ್ವಾಗತದೊಂದಿಗೆ ಮೆರವಣಿಗೆಯನ್ನು ಯಕ್ಷ ಕಲಾರಂಗ ಕಾರ್ಕಳದ ಅಧ್ಯಕ್ಷ ವಿಜಯ ಶೆಟ್ಟಿ ಉದ್ಘಾಟಿಸಿದರು. ಕಾರ್ಕಳ ಜೋಡುರಸ್ತೆ ಪುಸ್ತಕ ಮನೆಯಿಂದ ಹಿರ್ಗಾನ ಕ್ರಿಯೇಟಿವ್ ಕಾಲೇಜುವರೆಗೆ ನಡೆದ ಕನ್ನಡ ಭುವನೇಶ್ವರಿಭವ್ಯ ಪುರಮೆರವಣಿಗೆ ನಡೆಯಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿಯ ಶೋಭಾಯಾತ್ರೆ, ಸ್ಥಳೀಯ ಸಾಂಸ್ಕೃತಿಕ ತಂಡಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ, ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು, ಚೆಂಡೆ ಹಾಗೂ ಗೊಂಬೆ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ ಎಸ್.ಎಲ್, ಕಾರ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ .ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಅವಿನಾಶ್ ಶೆಟ್ಟಿ ,ಬೇಬಿ ಈಶ್ವರ ಮಂಗಳ, ಕಸಾಪ ಪಧಾಧಿಕಾರಿಗಳಾದ ದೇವದಾಸ್ ಕೆರೆಮನೆ , ನಿತ್ಯಾನಂದ ಪೈ, ಕ್ರಿಯೆಟಿವ್ ಕಾಲೇಜುಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ಉಪಸ್ಥಿತರಿದ್ದರು.







