ಕಾರ್ಕಳ | ಪ್ರೊ.ಬಿ.ಪದ್ಮನಾಭ ಗೌಡ ಅವರಿಗೆ ಶ್ರದ್ಧಾಂಜಲಿ

ಕಾರ್ಕಳ: ಇತ್ತೀಚೆಗೆ ನಿಧನರಾದ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಹಾಗೂ ಕಾರ್ಕಳ ಸಾಹಿತ್ಯ ಸಂಘದ ಮಾಜಿ ಅಧ್ಯಕ್ಷ ಪ್ರೊ. ಬಿ. ಪದ್ಮನಾಭ ಗೌಡ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಕಳ ಘಟಕದ ಆಶ್ರಯದಲ್ಲಿ ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಇನ್ನಾ ಎಂ.ವಿ. ಶಾಸ್ತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಪದ್ಮನಾಭ ಗೌಡ ಅವರ ಶಿಷ್ಯರಾದ ರಾಜೇಂದ್ರ ಭಟ್ ಕೆ. ಅವರು ಸಂಸ್ಮರಣ ಭಾಷಣ ಮಾಡಿ, ಗೌಡ ಅವರು ಶಿಕ್ಷಣ, ಯಕ್ಷಗಾನ ಹಾಗೂ ಸಾಹಿತ್ಯ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಶಿಕ್ಷಕ ಗಣೇಶ ಜಾಲ್ಸೂರು, ಪ್ರಭಾರ ಪ್ರಾಂಶುಪಾಲ ಪ್ರಕಾಶ್ ನಾಯಕ್ ಹಾಗೂ ಕಾಂತಾವರ ಕಾಂತೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ತಿಪ್ಪೇಸ್ವಾಮಿ ಅವರು ಮೃತರ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ಬಿ. ಪದ್ಮನಾಭ ಗೌಡ ಅವರು ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾಗಿ ಹಾಗೂ ಕಾರ್ಕಳ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಲ್ಲಿಸಿದ ಬಹುಮುಖ ಕೊಡುಗೆಗಳನ್ನು ಸ್ಮರಿಸಿದರು.
ಕಾಲೇಜಿನ ಸಂಚಾಲಕ ಶರತ್ ಶೆಟ್ಟಿ ಹಾಗೂ ಎಲ್ಲ ಅಧ್ಯಾಪಕರು ಪುಷ್ಪಾರ್ಚನೆ ಸಲ್ಲಿಸಿದರು. ಶಿಕ್ಷಕ ದೇವದಾಸ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಸಂಘದ ಕೋಶಾಧಿಕಾರಿ ಅರುಣ್ ರಾವ್ ವಂದಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ನಡೆದ ಮೌನ ಪ್ರಾರ್ಥನೆಯಲ್ಲಿ ಎಲ್ಲರೂ ಪಾಲ್ಗೊಂಡರು.






