ಕಾರ್ಕಳ: ಉದ್ಯೋಗ ಸಂದರ್ಶನ 'ವಿಕಾಸ ಉದ್ಯೋಗ ಸೇತು'ಗೆ ಚಾಲನೆ

ಕಾರ್ಕಳ : ಕಾರ್ಕಳ ವಿಕಾಸ ಸೇವಾ ಸಂಸ್ಥೆ ಆಶ್ರಯದಲ್ಲಿ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಉದ್ಯೋಗ ಸಂದರ್ಶನ ಮೇಳ 'ವಿಕಾಸ ಉದ್ಯೋಗ ಸೇತು' ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಉದ್ಘಾಟಿಸಿದರು,
ಈ ಸಂದರ್ಭ ಮಾತನಾಡಿದ ಅವರು ಉದ್ಯೋಗಕಾಂಕ್ಷಿಗಳಿಗೆ ಪರಿಶ್ರಮ, ನಿರಂತರತೆ ಬೇಕು.
ವಿದ್ಯಾವಂತ ಯುವಕ-ಯುವತಿಯರು ಸ್ವಂತ ಊರಲ್ಲೇ ತುಂಬಾ ಸುಲಭದ ಕೆಲಸಕ್ಕೆ ಮಹತ್ವ ನೀಡಿ. ಮೊದಲ ಕೆಲಸ ನಿಮ್ಮ ಜೀವನದ ಉದ್ಯೋಗಕ್ಕೆ ದಾರಿದೀಪವಾಗಬಹುದು. ಬೆಂಗಳೂರು ಮಾತ್ರವಲ್ಲ ದೇಶದ ವಿವಿಧ ರಾಜ್ಯದ ಕಂಪನಿಗಳನ್ನು ಆಯ್ಕೆಮಾಡಿ. ಬೇರೆ ರಾಜ್ಯದವರು ನಮ್ಮ ರಾಜ್ಯದಲ್ಲಿ ಕೆಲಸ ಮಾಡಲು ಸಾದ್ಯವಾದರೆ ಯಾಕೆ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಲು ನಮಗೆ ಸಾಧ್ಯವಿಲ್ಲ ಅವಕಾಶಗಳು ಸಿಕ್ಕಾಗ ಬಳಸಿಕೊಳ್ಳಿ ಎಂದು ಉದ್ಯೋಗಾಕಾಂಕ್ಷಿಗಳಿಗೆ ಕಿವಿಮಾತು ಹೇಳಿದರು.
ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಹ ಸಂಸ್ಥಾಪಕ ಅಶ್ವಥ್ ಎಸ್.ಎಲ್. ಮಾತನಾಡಿ, ಉದ್ಯೋಗ ಬೇಡಿ ಪಡೆಯುವುದಲ್ಲ ಸ್ವಂತ ಸಾಮರ್ಥ್ಯವೂ ಕೂಡ ಅಷ್ಟೇ ಮುಖ್ಯ. ಉದ್ಯೋಗ ಪಡೆಯುವುದು ಮುಖ್ಯವಲ್ಲ ಉದ್ಯೋಗದಲ್ಲಿ ಶಿಸ್ತು, ಪ್ರಾಮಾಣಿಕತೆ, ಪರಿಶ್ರಮ, ನಿಷ್ಠಾವಂತಿಕೆ, ಸ್ವಾವಲಂಬನೆ, ನೈತಿಕ ಮೌಲ್ಯವನ್ನು ಉಪಯೋಗಿಸಿ ಕೊಳ್ಳುವುದು ಮುಖ್ಯ ಎಂದರು
ಶಾಸಕ ವಿ ಸುನೀಲ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಒಳ್ಳೆಯ ಕಂಪನಿಗಳನ್ನು ಪರಿಚಯಿಸುತ್ತಿದ್ದೇವೆ. ಆ ಮೂಲಕ ನಿರಂತರ ಉದ್ಯೋಗ ಮೇಳ ಹಾಗೂ ಉದ್ಯೋಗ ಸಂದರ್ಶನಗಳನ್ನು ನಡೆಸಲು ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ವೇದಿಕೆಯಲ್ಲಿ ಬೆಂಗಳೂರಿನ ಫೋಕ್ಸೋನ್ ಸಂಸ್ಥೆಯ ವ್ಯವಸ್ಥಾಪಕ ದಯಾನಂದ್ ಉಪಸ್ಥಿತರಿದ್ದರು.
ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕರುಣಾಕರ್ ಕೋಟ್ಯಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.






