ಆ.23ರಿಂದ 25ರವರೆಗೆ ಉಡುಪಿಯಲ್ಲಿ ಕರ್ನಾಟಕ ರಾಜ್ಯ ಕಿರಿಯರ, ವಯೋಮಿತಿ ಕ್ರೀಡಾಕೂಟ: ಸ್ವರೂಪ ಟಿ.ಕೆ.

ಉಡುಪಿ, ಆ.7: ಕರ್ನಾಟಕ ರಾಜ್ಯ ಕಿರಿಯರ ಹಾಗೂ 23ರ ವಯೋಮಿತಿಯ ಕ್ರೀಡಾಕೂಟ ಇದೇ ಆ.23ರಿಂದ 25ರವರೆಗೆ ನಗರದ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ಕಿರಿಯರ ಮತ್ತು 23ರ ವಯೋಮಿತಿಯ ಕ್ರೀಡಾಕೂಟದ ಪೂರ್ವ ತಯಾರಿಯ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಮಟ್ಟದ ಈ ಕ್ರೀಡೆಯು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಅಖಿಲ ಭಾರತ ದಕ್ಷಿಣ ವಲಯ ಕ್ರೀಡಾಕೂಟಕ್ಕೆ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಲಿದ್ದಾರೆ. ಕ್ರೀಡಾಕೂಟವು ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾದ ನಿಯಮಗಳಡಿ ನಡೆಯುಲಿದೆ ಎಂದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಕಿರಿಯರ ಹಾಗೂ 23ರ ವಯೋಮಿತಿಯ ಕ್ರೀಡಾಕೂಟದಲ್ಲಿ ರಾಜ್ಯದ ವಿವಿದೆಡೆಗಳಿಂದ 1500ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದು, ಕ್ರೀಡಾ ಚಟುವಟಿಕೆಗಳನ್ನು ಕೈಗೊಳ್ಳಲು ಕ್ರೀಡಾ ಮೈದಾನದ ವ್ಯವಸ್ಥೆ, ಕ್ರೀಡಾ ಸಲಕರಣೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕ್ರೀಡಾಕೂಟದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೊರಜಿಲ್ಲೆಗಳಿಂದ ಆಗಮಿಸುವ ಕ್ರೀಡಾ ಸ್ಪರ್ಧಿಗಳಿಗೆ ತಂಗಲು ಪ್ರತ್ಯೇಕ ವಸತಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಕ್ರೀಡಾಪಟುಗಳು, ತರಬೇತುದಾರರು, ರೆಫ್ರಿಗಳು ಸೇರಿದಂತೆ ಎಲ್ಲರಿಗೂ ಎಲ್ಲಾ ವಿಧದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವಂತೆ ಅವರು ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಕ್ರೀಡಾಪಟುಗಳ ಭದ್ರತೆಗೆ ಅಗತ್ಯವಿರುವ ಪೊಲೀಸ್ ಬಂದೋಬಸ್ತ್ ನಿಯೋಜಿಸಬೇಕು. ವೈದ್ಯರುಗಳನ್ನು ಒಳಗೊಂಡ ವೈದ್ಯಕೀಯ ತಂಡವನ್ನು ತುರ್ತು ಚಿಕಿತ್ಸೆಗೆ ನಿಯೋಜಿಸಬೇಕು. ಆಂಬುಲೆನ್ಸ್ ವ್ಯವಸ್ಥೆಯನ್ನು ಸಹ ಕಲ್ಪಿಸಬೇಕು ಎಂದರು.
ಸಭೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್, ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ, ಎಎಸ್ಪಿ ಸುಧಾಕರ್ ನಾಯಕ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಷನ್ ಕುಮಾರ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.







