ಕರ್ನಾಟಕದ ಶ್ರೀಮಂತ ಪರಂಪರೆ, ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ನಮ್ಮ ಹೆಮ್ಮ : ವಿ. ಸುನಿಲ್ ಕುಮಾರ್

ಕಾರ್ಕಳ : ಕರ್ನಾಟಕದ ಶ್ರೀಮಂತ ಪರಂಪರೆ, ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ನಮ್ಮ ಹೆಮ್ಮೆಯಾಗಿದ್ದು, ಇವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ನಾಡು ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನೇಕ ಸಾಧಕರನ್ನು ನಾಡಿಗೆ ನೀಡಿದೆ. ಅವರ ಸಾಧನೆ ಮತ್ತು ಕೊಡುಗೆಗಳನ್ನು ಸ್ಮರಿಸುವುದರೊಂದಿಗೆ ಕನ್ನಡದ ಅಭಿಮಾನವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.
ಇದಕ್ಕೂ ಮುನ್ನ ಗಾಂಧಿ ಮೈದಾನದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತಾಧಿಕಾರಿ, ನಗರಾಭಿವೃದ್ಧಿ ಕೋಶ ಸುಬ್ರಹ್ಮಣ್ಯ ಶೆಟ್ಟಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿನ ಸಾಧನೆಗಳು ನಾಡಿನ ಹೆಮ್ಮೆಯಾಗಿವೆ. ಕನ್ನಡದ ಇತಿಹಾಸ ಮತ್ತು ಪರಂಪರೆಯನ್ನು ಅರಿತು ಭಾಷೆಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾರ್ಕಳದ ಅನಂತಶಯನದಿಂದ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಗೆ ಶಾಸಕ ವಿ. ಸುನೀಲ್ ಕುಮಾರ್ ಪುಷ್ಪಾರ್ಚನೆ ಸಲ್ಲಿಸಿ ಗೌರವ ಅರ್ಪಿಸಿದರು. ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆ ಬಸ್ ನಿಲ್ದಾಣ, ಮೂರು ರಸ್ತೆ ಮಾರ್ಗವಾಗಿ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಮಂಜುನಾಥ ಪೈ ಸಭಾಂಗಣದತ್ತ ಸಾಗಿತು.
ಮೆರವಣಿಗೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ತಾಯಿ ಭುವನೇಶ್ವರಿಗೆ ಗೌರವ ಸಲ್ಲಿಸಿದರು. ವಿವಿಧ ಸಂಘ-ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು. ಮಂಜುನಾಥ ರೋವರ್ ರೇಂಜರ್ಸ್ ತಂಡದ ಸದಸ್ಯರು ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಡೆಸಿದ ಶಿಸ್ತುಬದ್ಧ ಪಥಸಂಚಲನ ನಡೆಸಿದರು. ಪೊಲೀಸ್, ಗೃಹ ರಕ್ಷಕದಳ, ಅಗ್ನಿಶಾಮಕ ದಳ ಸಿಬಂದಿ ಪರೇಡ್‌ನಲ್ಲಿ ಭಾಗವಹಿಸಿದ್ದರು. ಪಿಎಸ್‌ಐ ಸೀಮಾ ಅಂಜುಮ್ ಪರೇಡ್ ನೇತೃತ್ವವಹಿಸಿದ್ದರು.
ಕಾರ್ಕಳ ಪೊಲೀಸ್ ಉಪ ವಿಭಾಗ ಎಎಸ್‌ಪಿ ಇಶಿತಾ ಗುಪ್ತ, ಕಾರ್ಕಳ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಪೊಲೀಸ್ ಇಲಾಖೆ ವೃತ್ತ ನಿರೀಕ್ಷಕ ರಾಘವೇಂದ್ರ, ಪಿಎಸ್‌ಐ ಗಳಾದ ಪ್ರಸನ್ನ, ಶಿವಕುಮಾರ್, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ ಕೊಂಡಳ್ಳಿ ಭಾಗವಹಿಸಿದ್ದರು. ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಜಯ್ ದೇವಾಡಿಗ ನಿರೂಪಿಸಿದರು. ಮಂಜುನಾಥ ಪೈ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ ನಡೆಸಲಾಯಿತು.






