ಕಟಪಾಡಿ ರಾ.ಹೆದ್ದಾರಿ ಓವರ್ ಪಾಸ್ ಕಾಮಗಾರಿ | ಗ್ರಾಮೀಣ ಜನರ, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.ಸೂಚನೆ

ಉಡುಪಿ, ಡಿ.15: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿಯಲ್ಲಿ ವೆಹಿಕಲ್ ಓವರ್ ಪಾಸ್ ಕಾಮಗಾರಿ ಪ್ರಾರಂಭಗೊಂಡಿದ್ದು, ಇದರಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಬದಲಿ ಮಾರ್ಗಗಳಲ್ಲಿ ಸುಗಮ ಹಾಗೂ ಸುರಕ್ಷತೆಯಿಂದ ಸಂಚರಿಸಲು ಅವಕಾಶ ಮಾಡಿಕೊಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ನಿರ್ದೇಶನಗಳನ್ನು ನೀಡಿದರು.
ಸೋಮವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ನಲ್ಲಿ ನಡೆಯುವ ರೋಡ್ ಓವರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಕುರಿತು ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಟಪಾಡಿ ಜಂಕ್ಷನ್ ನಲ್ಲಿ ಓವರ್ ಪಾಸ್ ಕಾಮಗಾರಿಯನ್ನು ಈಗಾಗಲೇ ಪ್ರಾರಂಭಿಸಿದ್ದು, ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗದ ರಸ್ತೆಗಳ ಮೂಲಕ ಸಂಚರಿಸಲು ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅದರಂತೆ ವಾಹನಗಳು ಈಗಾಗಲೇ ಸಂಚರಿಸುತ್ತಿದ್ದು, ಇದರಿಂದಾಗಿ ಗ್ರಾಮೀಣ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ವಾಹನಗಳ ಸಂಚಾರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಹಲವು ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮುಖಂಡರಿಂದ ದೂರುಗಳು ಬಂದಿವೆ. ಇವುಗಳನ್ನು ಪರಿಶೀಲನೆ ಮಾಡಿ, ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಶಿರ್ವದಿಂದ ಉಡುಪಿ ಕಡೆಗೆ ಸಂಚರಿಸುವ ಘನ ವಾಹನಗಳು, ಟ್ರಕ್ ಗಳು, ಮೂಡುಬೆಳ್ಳೆ-ದೆಂದೂರುಕಟ್ಟೆ, ಅಲೆವೂರು ಮಾರ್ಗವಾಗಿ ಉಡುಪಿಗೆ ಸಂಚರಿಸುತ್ತಿವೆ. ಈ ರಸ್ತೆಗಳು ಅಗಲ ಕಿರಿದಾಗಿದ್ದು, ಕೆಲವು ಮೇಲ್ಸೇತುವೆಗಳು ಶಿಥಿಲಗೊಂಡಿರುವ ದೂರುಗಳು ಬಂದಿವೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯವರು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಸೇತುವೆ ಸಾಮರ್ಥ್ಯ ಹೆಚ್ಚಿಸುವುದು ಸೇರಿದಂತೆ ಇತರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದವರು ಸಲಹೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೊರಕೆ ಮಾತನಾಡಿ, ರಾ.ಹೆದ್ದಾರಿ 66ರಲ್ಲಿ ಕಟಪಾಡಿ ಯಲ್ಲಿ ನಿರ್ಮಾಣಗೊಳ್ಳುತ್ತಿರುವ ವೆಹಿಕಲ್ ಓವರ್ ಪಾಸ್ ಕಾಮಗಾರಿ ಪ್ರಾರಂಭಕ್ಕೆ ಮುನ್ನ ಕಾಮಗಾರಿಯ ಕುರಿತಂತೆ ಈ ಪರಿಸರದ ಕೋಟೆ, ಕಟಪಾಡಿ, ಕುರ್ಕಾಲು, ಶಿರ್ವ ಇನ್ನಂಜೆ, ಮಣಿಪುರ, ಅಲೆವೂರು ಹಾಗೂ ಉದ್ಯಾವರ ಗ್ರಾಪಂಗಳ ಅಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಪ್ರಮುಖರ ವಿಶ್ವಾಸ ಪಡೆಯಬೇಕಿತ್ತು ಎಂದರು.
ಸಾರ್ವಜನಿಕರ ಬೇಡಿಕೆಯಂತೆ ಜನಸಾಮಾನ್ಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೆ, ಅಟೋ ಹಾಗೂ ಟ್ಯಾಕ್ಸಿ ಮುಂತಾದ ವಾಹನ ಸಂಚಾರಗಳಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಲಾಗಿತ್ತು ಎಂದು ಸೊರಕೆ ವಿವರಿಸಿದರು.
ವಾಹನಗಳಿಗೆ ಸಂಚರಿಸಲು ಹೊತ್ತುಪಡಿಸಿರುವ ಬದಲಿ ರಸ್ತೆಗಳಲ್ಲಿ ಕೆಲವು ತೀರಾ ಕಿರಿದಾಗಿದ್ದು, ಒಂದು ಭಾರೀ ವಾಹನ ಸಂಚರಿಸಲು ಮಾತ್ರ ಅವಕಾಶವಿದೆ. ಎದುರಿನಿಂದ ಸಣ್ಣ ವಾಹನಗಳು ಬಂದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಕೆಲವು ಜಾಗಗಳಲ್ಲಿ ರಸ್ತೆ ಅಗಲೀಕರಣದ ಅಗತ್ಯವಿದೆ ಹಾಗೂ ದುರ್ಬಲವಿರುವ ಸೇತುವೆಗಳ ದುರಸ್ಥಿ ಹಾಗೂ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಈ ಬಗ್ಗೆ ಲೋಕೋಪಯೋಗಿ ಸಚಿವರೊಂದಿಗೆ ಚರ್ಚಿಸಿ, ಅಗತ್ಯವಿರುವ ಅನುದಾನ ವನ್ನು ಬಿಡುಗಡೆಗೊಳಿಸಲು ಮನವಿ ಮಾಡಲಾಗುವುದು ಎಂದರು.
ಬದಲಿಯಾಗಿ ಸೂಚಿಸಿರುವ ಮಾರ್ಗದಲ್ಲಿ ವಾಹನಗಳ ಸಂಚಾರದಿಂದ ಗ್ರಾಮೀಣ ಭಾಗದ ಜನರ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಹಾಲಿ ಕಾಮಗಾರಿ ಕೈಗೊಳ್ಳುತ್ತಿರುವ ರಸ್ತೆಯ ಆಜು-ಬಾಜಿನಲ್ಲಿ ಬದಲಿ ಮಾರ್ಗ ಕಲ್ಪಿಸಬೇಕೆಂದು ಹಲವು ಸ್ಥಳೀಯ ಗ್ರಾಮ ಪಂಚಾಯತ್ಗಳ ಅಧ್ಯಕ್ಷರು ಹಾಗೂ ಸದಸ್ಯರು ಸಲಹೆ ನೀಡಿದರು.
ಸಭೆಯಲ್ಲಿ ಸ್ಥಳೀಯ ಎಂಟು ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು ಹಾಗೂ ಸದಸ್ಯರು, ಜನಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರ್ಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಅಭಿಯಂತರರು ಉಪಸ್ಥಿತರಿದ್ದರು.







