ಕಾಪು: ಕಿಡಿಗೇಡಿಗಳಿಂದ ಮಟ್ಟುಗುಳ್ಳ ಪ್ರತಿಕೃತಿ ಧ್ವಂಸ: ಕ್ರಮಕ್ಕೆ ಆಗ್ರಹ

ಕಾಪು, ಮೇ 23: ಕಟಪಾಡಿ ಮಟ್ಟುವಿನಲ್ಲಿ ನಿರ್ಮಿಸಲಾಗಿದ್ದ ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಮಾದರಿಯನ್ನು ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಧ್ವಂಸಗೊಳಿಸಿರುವ ಬಗ್ಗೆ ವರದಿಯಾಗಿದೆ.
ಮಟ್ಟು ಗುಳ್ಳದ ಮೇಲಿನ ಅಪಾರ ಅಭಿಮಾನ ಮತ್ತು ಪ್ರೀತಿಯಿಂದ ದಾನಿಗಳಾದ ಸುಭಾಷ್ ಎಂ. ಸಾಲ್ಯಾನ್ ನೆಲ್ಲಿಕಟ್ಟೆ ಎಂಬವರು ‘ಐ ಲವ್ ಮಟ್ಟು’ ಎಂಬ ವಿನ್ಯಾಸದೊಂದಿಗೆ ಮಟ್ಟ ಗುಳ್ಳದ ಆಕರ್ಷಕ ಮಾದರಿಯನ್ನು ನಿರ್ಮಿಸಿ ಗ್ರಾಮಕ್ಕೆ ಸಮರ್ಪಿಸಿದ್ದರು. ಈ ವಿನ್ಯಾಸವು ಪ್ರವಾಸಿಗರು ಹಾಗೂ ಯುವಜನರಿಗೆ ಮಟ್ಟು ಗ್ರಾಮದ ಗುರುತಾಗಿ ಪರಿಣಮಿಸಿತ್ತು.
ಆದರೆ ಕೆಲವು ದುಷ್ಕರ್ಮಿಗಳು ಈ ಮಾದರಿಯನ್ನು ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿದ್ದಾರೆ. ಇದು ಕೇವಲ ಒಂದು ಮಾದರಿಯ ಮೇಲಿನ ದಾಳಿ ಅಲ್ಲ, ಮಟ್ಟು ಗ್ರಾಮದ ಗೌರವ, ರೈತರ ಭಾವನೆ ಮತ್ತು ವಿಶ್ವಪ್ರಸಿದ್ಧ ಮಟ್ಟು ಗುಳ್ಳದ ಅಸ್ತಿತ್ವದ ಮೇಲಿನ ಅವಮಾನಕರ ಕೃತ್ಯವಾಗಿದೆ ಎಂದು ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಡಿ. ಬಂಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಟ್ಟು ಗುಳ್ಳ ಬೆಳೆಗಾರರ ಸಂಘ ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಗ್ರಾಮಸ್ಥರ ಮತ್ತು ರೈತರ ಮನಸ್ಸಿಗೆ ನೋವುಂಟು ಮಾಡಿರುವ ಕಿಡಿಗೇಡಿಗಳನ್ನು ತಕ್ಷಣವೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಅವರು ಆಗ್ರಹಿಸಿದ್ದಾರೆ.
‘ವಿಶ್ವಪ್ರಸಿದ್ಧ ಮಟ್ಟು ಗುಳ್ಳ ಎಂಬುದು ಕೇವಲ ಒಂದು ಬೆಳೆ ಅಥವಾ ತರಕಾರಿ ಮಾತ್ರವಲ್ಲ, ಅದು ನಮ್ಮ ಮಟ್ಟು ಗ್ರಾಮದ ಹೆಮ್ಮೆ. ಕರಾವಳಿಯ ಸಂಸ್ಕೃತಿ, ರೈತರ ಪರಿಶ್ರಮ ಮತ್ತು ಸೋದೆ ವಾದಿರಾಜ ಸ್ವಾಮೀಜಿಯವರ ಪ್ರಸಾದದ ನೆನಪನ್ನು ಹೊತ್ತಿರುವ ಅಮೂಲ್ಯ ಪರಂಪರೆಯಾಗಿದೆ. ದೇಶ-ವಿದೇಶಗಳಲ್ಲಿಯೂ ತನ್ನದೇ ಆದ ವಿಶೇಷ ಸ್ಥಾನ ಪಡೆದಿರುವ ಮಟ್ಟು ಗುಳ್ಳ ಇಂದು ಉಡುಪಿ ಜಿಲ್ಲೆಯ ಗೌರವ ಚಿಹ್ನೆಯಾಗಿ ಗುರುತಿಸಿಕೊಂಡಿದೆ’
-ಸುನೀಲ್ ಡಿ. ಬಂಗೇರ, ಅಧ್ಯಕ್ಷರು, ಮಟ್ಟುಗುಳ್ಳ ಬೆಳೆಗಾರರ ಸಂಘ






