ಕಾಪು: ಯಕ್ಷಗಾನ ಕಲಾರಂಗದ 84ನೇ ಮನೆ ಹಸ್ತಾಂತರ

ಕಾಪು, ಜ.28: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ದ್ವಿತೀಯ ವರ್ಷದಲ್ಲಿ ಅರಿವಳಿಕೆ ತರಬೇತಿ ವ್ಯಾಸಂಗ ಮಾಡುತ್ತಿರುವ ಉದಯ ಜೋಜಿ ಮತ್ತು ರತ್ನಾ ಜೋಗಿ ಅವರ ಪುತ್ರ ವಿದ್ಯಾರ್ಥಿ ಚೇತನ್ ಜೋಗಿ ಇವನಿಗೆ ಕಾಪು ತಾಲೂಕಿನ ಶಂಕರಪುರದಲ್ಲಿ ದಾನಿಗಳ ಪ್ರಾಯೋಜಕತ್ವದಲ್ಲಿ ನವೀಕರಿಸಿದ ‘ಜಯಲಕ್ಷ್ಮೀ ನಿಲಯ’ ಮನೆಯನ್ನು ಇತ್ತೀಚೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು.
ಜ್ಯೋತಿ ಬೆಳಗಿಸಿ ಮನೆಯನ್ನು ಉದ್ಘಾಟಿಸಿದ ಶಾಸಕ ಗುರ್ಮೆ ಮಾತನಾಡಿ, ಯಕ್ಷಗಾನ ಕಲಾರಂಗಕ್ಕೆ ಇರುವ ಸಾಮಾಜಿಕ ಬದ್ಧತೆ, ಕಳಕಳಿ ಅನನ್ಯ. ಇದು ಸಾಮಾಜಿಕವಾಗಿ ಕೆಲಸ ಮಾಡುವ ಎಲ್ಲ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.
ಆದರ್ಶ ಆಸ್ಪತ್ರೆಯ ಆಡಳಿತಾಧಿಕಾರಿ ವಿಮಲಾ ಚಂದ್ರಶೇಖರ್ ಮಾತನಾಡಿ, ಯಕ್ಷಗಾನ ಕಲಾರಂಗದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದು ಸಂತೋಷವಾಗಿದೆ. ಅರ್ಹ ಬಡ ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಿ ಯಾವ ಆಡಂಬರವಿಲ್ಲದೆ ಸರಳವಾಗಿ ಹಸ್ತಾಂತರಿಸುವ ಕ್ರಮ ಖಂಡಿತ ಪ್ರಶಂಸನೀಯ ಎಂದರು.
ಮನೆ ನಿರ್ಮಿಸಿಕೊಟ್ಟ ದಾನಿ ಗುರುರಾಜ ಅಮೀನ್, ವಿದ್ಯಾರ್ಥಿ ಚೇತನ ಜೋಗಿಗೆ ಕಿವಿಮಾತು ಹೇಳಿದರು. ಜಯಲಕ್ಷ್ಮೀ ಗುರುರಾಜ ಅಮೀನ್, ನಿವೃತ್ತ ಪ್ರಾಧ್ಯಾಪಕಿ ಶಾರದಾ ಮೇಡಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗ ಸಂಸ್ಥೆಯ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ.ಕೆ. ಸದಾಶಿವ ರಾವ್, ಸದಸ್ಯರಾದ ಯು. ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ ಮುದ್ರಾಡಿ, ಹಿರಿಯಣ್ಣ ಕಿದಿಯೂರ್, ಕಿಶೋರ್ ಸಿ.ಉದ್ಯಾವರ, ಗಣಪತಿ ಭಟ್, ಎಚ್. ಎನ್. ವೆಂಕಟೇಶ್, ಅಶೋಕ ಎಂ., ನಾಗರಾಜ ಹೆಗಡೆ, ಸುದರ್ಶನ ಬಾಯರಿ, ವಿಶ್ವನಾಥ, ಚಂದ್ರಕಾಂತ ಕೆ. ಎನ್. ಉಪಸ್ಥಿತರಿದ್ದರು.
ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.







