ಆ.31ರಿಂದ ಕಾವಿ ವೈವಿಧ್ಯ; ಕಾವಿ ಕಲೆಯ ಪ್ರಯೋಗಾತ್ಮಕ ಪ್ರದರ್ಶನ

ಉಡುಪಿ, ಆ.26: ಮಹಾರಾಷ್ತ್ರದಿಂದ ತೊಡಗಿ ಕಾಸರಗೋಡಿನ ತನಕ ಹಬ್ಬಿರುವ ಸಾಂಪ್ರದಾಯಿಕ ಹಾಗೂ ಜನಪದೀಯ ಸೊಗಡಿನ ‘ಕಾವಿ ಕಲೆ’ ಯ ವಿಭಿನ್ನವಾದ ಪ್ರಯೋಗಾತ್ಮಕ ಕಲಾ ಪ್ರದರ್ಶನವನ್ನು ಕಾವಿ ಆರ್ಟ್ ಪೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸಿದ್ದು, ನಗರದ ಬಡಗುಪೇಟೆಯಲ್ಲಿರುವ 10-03-28 ಗ್ಯಾಲರಿಯಲ್ಲಿ ಆ.31ರಿಂದ ಸೆ.8ರವರೆಗೆ ನಡೆಯಲಿದೆ.
ಕಲಾ ಪ್ರದರ್ಶನವನ್ನು ಆ.31ರ ಬೆಳಗ್ಗೆ 11 ಗಂಟೆಗೆ ಉಡುಪಿಯ ಕರ ಕುಶಲ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕಿ ವೀಣಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಆನಂದ ಕಾರ್ನಾಡ್ ಹಾಗೂ ಪೌಂಡೇಶನ್‌ನ ನಿರ್ದೇಶಕ ರಾಗಿರುವ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿರುವರು.
ಈ ಕಲಾಪ್ರದರ್ಶನವು ಕಾವಿ ಕಲೆಯ ಕಲಾ ಮಾಧ್ಯಮಕ್ಕೆ ಒಂದು ನವೀನ ಮಾರ್ಗವನ್ನು ತೆರೆದು ಅದನ್ನು ಇಂದಿಗೆ ಮರು ಆವಿಷ್ಕರಿಸುವ ಸಾಮೂಹಿಕ ಪ್ರಯತ್ನವಾಗಿದೆ. ಇದರ ಸಂಯೋಜನೆಯನ್ನು ಕಳೆದ 20 ವರ್ಷಗಳಿಂದ ಕಾವಿ ಕಲೆಯ ಬಗ್ಗೆ ನಿರಂತರ ಪ್ರಯೋಗಗಳನ್ನು ನಡೆಸುತ್ತಿರುವ ಕಲಾವಿದರಾದ ಡಾ. ಜನಾರ್ದನ ಹಾವಂಜೆ ಮಾಡುತ್ತಿದ್ದು, ಉಡುಪಿ, ಉತ್ತರ ಕನ್ನಡ ಹಾಗೂ ಮಂಗಳೂರು ಭಾಗದ 18 ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ.
ಇದು ಕೇವಲ ಕಲಾ ಪ್ರದರ್ಶನವಾಗಿರದೇ ಸಾಂಪ್ರದಾಯಿಕ ಕಾವಿ ಕಲೆಯ ವಿನ್ಯಾಸವನ್ನು ಜವಳಿ, ಟೈಲ್ಸ್, ಗಾಜು, ಕಾಗದ, ಪ್ರಿಂಟ್ ಮೇಕಿಂಗ್, ಸ್ಕೃಿನ್ ಪ್ರಿಂಟ್, ಸ್ಟಿಕ್ಕರ್ ಕಟ್ಟಿಂಗ್ ಮೊದಲಾದ ನವೀನ ಮಾಧ್ಯಮಗಳಲ್ಲಿ ಪರಿವರ್ತಿಸುವ ಮೂಲಕ ಸುಲಭವಾಗಿ ಜನರಿಗೆ ತಲುಪುವ ಸಾಧ್ಯತೆ ಯೊಂದಿಗೆ ನಡೆಸುತ್ತಿರುವ ಪ್ರಯೋಗವಾಗಿದೆ.
ಕಲಾ ಪ್ರದರ್ಶನದಲ್ಲಿ ಶ್ರೀನಿವಾಸ ಆಚಾರ್, ರಮೇಶ್ ಅಂಬಾಡಿ, ಸಿರ್ಸಿಯ ರಾಜೇಶ್ ಶಿರ್ಸೀಕರ್, ವರ್ಷಾ ಎ.ಜೆ., ಆಶ್ಲೇಷ್ ಭಟ್, ವಿಕ್ರಮ್ ಸುವರ್ಣ, ನಯನಾ ಆಚಾರ್ಯ, ಕೀರ್ತಿಕುಮಾರ್, ಪುರಂದರ್ ಮಲ್ಪೆ, ಸೌಮ್ಯಾ ಆಚಾರ್ಯ, ರಾಘವೇಂದ್ರ ಕಲ್ಕೂರ, ಮಂಗಳೂರಿನ ಪುಷ್ಪಾಂಜಲಿ ರಾವ್, ಪುರಂದರ ಆಚಾರ್ಯ, ಬೇಬಿ ಎಂ. ರಾವ್, ಮಂಜುನಾಥ ರಾವ್, ಅಕ್ಷತಾ ವಿಶು ರಾವ್, ಸಂತೋಷ್ ಪೈ ಹಾಗೂ ಜನಾರ್ದನ ಹಾವಂಜೆ ಅವರ ಸುಮಾರು 30 ಕಲಾಕೃತಿಗಳು ಪ್ರದರ್ಶನದಲ್ಲಿರಲಿವೆ.
ಪ್ರದರ್ಶನವು ಆ.31ರಿಂದ ಸೆ.8ರವರೆಗೆ ಪ್ರತಿದಿನ ಅಪರಾಹ್ನ 3 ರಿಂದ ಸಂಜೆ 7 ರ ತನಕ ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಿದೆ ಎಂದು ಕಲಾವಿದ ಡಾ.ಜನಾರ್ದನ ಹಾವಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







