ಕಿಶೋರ ಯಕ್ಷಗಾನ ಸಂಭ್ರಮ ಸಮಾರೋಪ

ಉಡುಪಿ, ಡಿ.19: ಯಕ್ಷಗಾನ ಕಲೆ, ಕಲಾವಿದರ ಹಿತದೃಷ್ಟಿಯಿಂದ ಉಡುಪಿಯ ಯಕ್ಷಗಾನ ಕಲಾರಂಗ ನಡೆಸುತ್ತಿ ರುವ ನಿಸ್ವಾರ್ಥ ಸೇವೆ ಇತರ ಕ್ಷೇತ್ರಗಳಿಗೆ ಮಾದರಿಯಾಗಿದೆ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ನಡೆದ ಕಿಶೋರ ಯಕ್ಷಗಾನ ಸಂಭ್ರಮ -2025ರ ಸಮಾರೋಪದಲ್ಲಿ ಅವರು ಮಾತನಾಡುತಿದ್ದರು. ಶಿಕ್ಷಣ, ಧರ್ಮ, ಕಲೆ, ಸೇವೆಗೆ ಉಡುಪಿ ಪ್ರಖ್ಯಾತಿ ಪಡೆದಿದೆ. ಈ ಯಕ್ಷ ಶಿಕ್ಷಣದ ಮೂಲಕ ಯಕ್ಷಗಾನ ಕಲಾರಂಗ ಈ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೇರಿಸಿದೆ ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಶಿಕ್ಷಣ ಇಂದು ಹೆಮ್ಮರ ವಾಗಿ ಬೆಳೆದಿದ್ದು, 3000ಕ್ಕೂ ಅಧಿಕ ಮಕ್ಕಳು ಯಕ್ಷ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಯಕ್ಷ ಶಿಕ್ಷಣದ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನ ನಡೆದಿದೆ. ಸಭಾಕಂಪನ ಇಲ್ಲದೆ ನಿರರ್ಗಳ ಶುದ್ಧ ಕನ್ನಡ ಭಾಷೆ, ಅಭಿನಯ, ನಾಟ್ಯ ಹೀಗೆ ಎಲ್ಲದ ರಲ್ಲೂ ಈ ಮಕ್ಕಳು ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಯಕ್ಷಗಾನ ಕಲೆಗೆ ಭವ್ಯ ಭವಿಷ್ಯವನ್ನು ಬರೆದಿರುವ ಯಕ್ಷ ಶಿಕ್ಷಣ ನಮ್ಮ ರಾಜ್ಯಕ್ಕೆ ಹೆಮ್ಮೆ ಎಂದರು.
ಪುತ್ತಿಗೆ ಕಿರಿಯ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ, ದಾನಿ ಯು.ವಿಶ್ವನಾಥ ಶೆಣೈ ಉಪಸ್ಥಿತರಿದ್ದರು. ವಿಮರ್ಶಕ ಡಾ.ಪ್ರಭಾಕರ ಜೋಶಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರದರ್ಶನ ನೀಡಿದ ಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಕೃತಿ, ಸಮರ್ಥ, ಅಮೋಘ, ಪ್ರಾರ್ಥನಾ, ಸಾನ್ವಿ ಬಲ್ಲಾಳ, ದಿಷಿತಾ, ಬಿಂದು, ಮಣಿಕಂಠ, ಅವನಿ ಪಡುಕೋಣೆ, ಹರ್ಷಿತಾ, ಮನೋಜ್, ಅಮೃತಾ ಮೊದಲಾದವರು ತಮ್ಮ ಅನುಭವ ಗಳನ್ನು ಹಂಚಿಕೊಂಡರು.
ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಜಿ.ಶೆಟ್ಟಿ, ಯು.ಎಸ್.ರಾಜಗೋಪಾಲ ಆಚಾರ್ಯ, ನಿರಂಜನ ಭಟ್, ಗಣೇಶ ಬ್ರಹ್ಮಾವರ, ಕೆ.ಸದಾಶಿವ ರಾವ್, ನಾಗರಾಜ ಹೆಗಡೆ, ಗಣಪತಿ ಭಟ್, ಕೆ. ಅಜಿತ್ ಕುಮಾರ್, ಎಚ್.ಎನ್.ವೆಂಕಟೇಶ, ಕೆ.ಆನಂದ ಶೆಟ್ಟಿ, ಡಾ. ರಾಘವೇಂದ್ರ ರಾವ್, ಡಾ.ಪ್ರತಿಮಾ, ಮಂಜುನಾಥ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಿಸಿದರು. ಶ್ರೀಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ’ಶಶಿಪ್ರಭಾ ಪರಿಣಯ’ ಯಕ್ಷಗಾನ ಪ್ರದರ್ಶನಗೊಂಡಿತು.







