ಯಕ್ಷಗಾನ ಕಲಿಕೆಗೆ ಪೂರಕ: ಪ್ರೊ.ವೈ.ಭಾಸ್ಕರ ಶೆಟ್ಟಿ

ಶಿರ್ವ: ಯಕ್ಷಗಾನ ಕಲಿಕೆ ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಭಾಷಾ ಕೌಶಲ್ಯವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಪುರಾಣಜ್ಞಾನ, ಕಠಿಣಪರಿಶ್ರಮ ಪ್ರವೃತ್ತಿ, ಕ್ರಿಯಾಶೀಲತೆಯನ್ನು ಬೆಳೆಸುತ್ತದೆ ಎಂದು ಶಿರ್ವದ ಎಂ.ಎಸ್. ಆರ್.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ವೈ.ಭಾಸ್ಕರ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಶಿರ್ವದ ಮಹಿಳಾ ಸೌಧದಲ್ಲಿ ಮೊದಲ ಬಾರಿ ಆಯೋಜಿಸಿದ್ದ ಕಿಶೋರ ಯಕ್ಷಸಂಭ್ರಮ-೨೦೨೩ರ ನಾಲ್ಕುದಿನಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಇದರಿಂದ ಸಹಜ ವಾಗಿ ಯಕ್ಷಗಾನ ತರಬೇತಿ ಪಡೆದ ವಿದ್ಯಾರ್ಥಿಗಳು ಕಲಿಕೆ ಹಾಗೂ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾರೆ ಎಂದವರು ತಿಳಿಸಿದರು
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಅಧ್ಯಕ್ಷತೆ ವಹಿಸಿದ್ದರು. ಡಾ.ಸ್ಫೂರ್ತಿ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಾರಾಯಣ ಎಂ.ಹೆಗಡೆ, ಎಚ್. ಎನ್. ಶೃಂಗೇಶ್ವರ, ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.
ಶಿರ್ವ ಪ್ರದರ್ಶನ ಸಂಘಟನಾ ಸಮಿತಿಯ ಸಂಯೋಜಕ ವಿ.ಜಿ.ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಅನಂತ ಮೂಡಿತ್ತಾಯ ವಂದಿಸಿದರು. ನಟರಾಜ ಉಪಾಧ್ಯಾಯ, ಗಣೇಶ ಬ್ರಹ್ಮಾವರ ಸಹಕರಿಸಿದರು.ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಮೊದಲ ದಿನದಂದು ಪಟ್ಲ ಯು.ಎಸ್.ನಯಕ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಸಸುಬ್ರಹ್ಮಣ್ಯ ಪ್ರಸಾದ್ ನಿರ್ದೇಶನದಲ್ಲಿ ಶಶಿಪ್ರಭಾ ಪರಿಣಯ ಹಾಗೂ ಇನ್ನಂಜೆಯ ಎಸ್.ವಿ.ಎಚ್.ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಶಾಂತಾರಾಮ ಆಚಾರ್ಯರ ನಿರ್ದೇಶನದಲ್ಲಿ ಮಧುರಾ ಮಹೀಂದ್ರ ಯಕ್ಷಗಾನ ಪ್ರದರ್ಶನಗೊಂಡಿತು.







